Skip to main content
ವಿಡಿಯೋ
politics

ಖರ್ಗೆ ಅವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ, ಕೂಡಲೇ ರಾಜಕೀಯ ನಿವೃತ್ತಿ ಕೊಡಿಸಿ: ಸಿ.ಟಿ. ರವಿ ಆಕ್ರೋಶ

By Bhavana Gowda
ಖರ್ಗೆ ಅವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ, ಕೂಡಲೇ ರಾಜಕೀಯ ನಿವೃತ್ತಿ ಕೊಡಿಸಿ: ಸಿ.ಟಿ. ರವಿ ಆಕ್ರೋಶ

ಖರ್ಗೆ ಅವರ ಹೇಳಿಕೆಗಳು ವೈಯಕ್ತಿಕವೋ ಅಥವಾ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೋ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಒಂದು ವೇಳೆ ಇದು ಪಕ್ಷದ ಹೇಳಿಕೆಯಾಗಿದ್ದರೆ, ಚುನಾವಣಾ ಆಯೋಗವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಖರ್ಗೆ ಅವರು ಹಿರಿಯರು, ಆರು ದಶಕಗಳ ಕಾಲ ರಾಜಕಾರಣದಲ್ಲಿ ಪಳಗಿದವರು. ಆದರೆ ಅವರ ಇತ್ತೀಚಿನ ಮಾತುಗಳಲ್ಲಿ ಮುತ್ಸದ್ದಿತನ ಕಾಣುತ್ತಿಲ್ಲ, ಬದಲಿಗೆ ದ್ವೇಷ ಮತ್ತು ಮಾನಸಿಕ ಅಸ್ವಸ್ಥತೆ ಎದ್ದು ಕಾಣುತ್ತಿದೆ" ಎಂದು ಅವರು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ಖರ್ಗೆ ಅವರ ಪ್ರತಿಯೊಂದು ಆರೋಪಗಳಿಗೂ ಸಾಲು ಸಾಲು ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದರು.

ಕರ್ನಾಟಕದ ಜನರು ಅನಕ್ಷರಸ್ಥರೇ?

ಕೇರಳದಲ್ಲಿ ಖರ್ಗೆ ಅವರು ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಸಿ.ಟಿ. ರವಿ, "ಗುಜರಾತ್ ಜನರು ಅನಕ್ಷರಸ್ಥರು ಎಂದು ಖರ್ಗೆ ಹೇಳಿದ್ದಾರೆ. ಕೇರಳದ ಬುದ್ಧಿವಂತ ಜನರು ಬಿಜೆಪಿಗೆ ಅವಕಾಶ ನೀಡಿಲ್ಲ ಎನ್ನುವ ಅವರ ತರ್ಕದಂತೆಯೇ ನೋಡುವುದಾದರೆ, ಕರ್ನಾಟಕದ ಜನರು 1998ರಿಂದ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಾಗಾದರೆ ಖರ್ಗೆ ಅವರ ದೃಷ್ಟಿಯಲ್ಲಿ ಕರ್ನಾಟಕದ ಜನರು ಅನಕ್ಷರಸ್ಥರಾ?" ಎಂದು ಪ್ರಶ್ನಿಸಿದರು.

ಇದು ಗಾಂಧಿ ತತ್ವವೇ?

ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷದ ಸರ್ಪಕ್ಕೆ ಹೋಲಿಸಿ, 'ಮುಂದಕ್ಕೆ ಹೋಗಿ ಕೊಲ್ಲಿ' ಎಂಬರ್ಥದಲ್ಲಿ ಖರ್ಗೆ ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರವಿ, "ನೀವು ಗಾಂಧಿ ಅನುಯಾಯಿ ಎಂದು ಹೇಳಿಕೊಳ್ಳುತ್ತೀರಿ. ದ್ವೇಷ ಕಾರುವುದನ್ನೇ ಗಾಂಧೀಜಿ ಬೋಧಿಸಿದ್ದರಾ? ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ರಾಜ್ಯ ಸರ್ಕಾರ ತಂದಿರುವ 'ದ್ವೇಷ ಭಾಷಣ' (Hate Speech) ಬಿಲ್ ಅಡಿ ಖರ್ಗೆ ಅವರ ಈ ಮಾತುಗಳು ಅಪರಾಧವಾಗಲ್ವಾ?" ಎಂದು ಸರ್ಕಾರದ ಕಾಲೆಳೆದರು.

'ಮರಿ ಖರ್ಗೆ'ಗೆ ಸಿ.ಟಿ. ರವಿ ಸವಾಲ್

ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಕುಟುಕಿದ ಸಿ.ಟಿ. ರವಿ, "ಮರಿ ಖರ್ಗೆ ಪ್ರಿಯಾಂಕ್ ಅವರು ತಮ್ಮ ತಂದೆಯ ಇಂತಹ ದ್ವೇಷದ ಭಾಷಣಗಳ ಬಗ್ಗೆ ಏನು ಹೇಳುತ್ತಾರೆ? ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಅವರಿಗೆ ಯೋಗ್ಯ ಚಿಕಿತ್ಸೆ ಕೊಡಿಸಿ ಮತ್ತು ರಾಜಕೀಯ ನಿವೃತ್ತಿ ಕೊಡಿಸಿ. ಇಂತಹ ಹೇಳಿಕೆಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ" ಎಂದರು.

ಬ್ರಾಹ್ಮಣತ್ವ ಎಂದರೆ ಕೊಲ್ಲುವುದೇ?

ಅಸ್ಸಾಂ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ನೀಡಿದ್ದ 'ಬ್ರಾಹ್ಮಣತ್ವ'ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಬ್ರಾಹ್ಮಣತ್ವ ಎಂದರೆ ಏನು ಎಂದು ಪ್ರಿಯಾಂಕ್ ಅವರಿಗೆ ತಿಳಿದಿದೆಯೇ? ಬಸವಣ್ಣನವರಲ್ಲೂ ನಾವು ಬ್ರಾಹ್ಮಣತ್ವವನ್ನು ಕಾಣುತ್ತೇವೆ. ಬ್ರಾಹ್ಮಣತ್ವ ಯಾರನ್ನಾದರೂ ಕೊಲ್ಲಿ ಎಂದು ಹೇಳಿಕೊಟ್ಟಿದೆಯೇ? ಇಲ್ಲವಲ್ಲ?" ಎಂದು ತಿರುಗೇಟು ನೀಡಿದರು.

ಚುನಾವಣಾ ಆಯೋಗಕ್ಕೆ ಆಗ್ರಹ:

ಖರ್ಗೆ ಅವರ ಹೇಳಿಕೆಗಳು ವೈಯಕ್ತಿಕವೋ ಅಥವಾ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೋ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಒಂದು ವೇಳೆ ಇದು ಪಕ್ಷದ ಹೇಳಿಕೆಯಾಗಿದ್ದರೆ, ಚುನಾವಣಾ ಆಯೋಗವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.