ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಪಂಜಾಬ್ ಪೊಲೀಸರ ಕೌಂಟರ್-ಇಂಟೆಲಿಜೆನ್ಸ್ ವಿಭಾಗ ಬಂಧಿಸಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಸೇನೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಆರೋಪಿ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಗನ್ ದೀಪ್ ಸಿಂಗ್ ಕಳೆದ 5 ವರ್ಷಗಳಿಂದ ಪಾಕಿಸ್ತಾನ ಮೂಲದ ಖಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚೌಹಾಣ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪಂಜಾಬ್ ಪೊಲೀಸರ ಕೌಂಟರ್-ಇಂಟೆಲಿಜೆನ್ಸ್ ವಿಭಾಗದಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ತಾರ್ನ್ ತರಣ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಪಂಜಾಬ್ ಪೊಲೀಸ್ ಡಿಜಿಪಿ ಮಂಗಳವಾರ ತಿಳಿಸಿದ್ದಾರೆ. ಆರೋಪಿಯನ್ನು ತಾರ್ನ್ ತರಣ್ ನ ಮೊಹಲ್ಲಾ ರೊಡುಪುರ್ ನಿವಾಸಿ ಗಗನ್ ದೀಪ್ ಸಿಂಗ್ ಅಲಿಯಾಸ್ ಗಗನ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಪಾಕಿಸ್ತಾನ ಮೂಲದ ಖಲಿಸ್ತಾನಿ ಅನುಕಂಪ ಹೊಂದಿರುವ ಗೋಪಾಲ್ ಸಿಂಗ್ ಚೌಹಾಣ್ ಅವರೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಸೇನೆಯ ಚಟುವಟಿಕೆಗಳು ಮತ್ತು ನಿಯೋಜನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಆರೋಪಿಗಳು ಪಾಕಿಸ್ತಾನ ಏಜೆನ್ಸಿಗೆ ನೀಡಿದ್ದ.