IPL 2026: ಕಠಿಣ ನಿಯಮ ಜಾರಿಗೂ ಮುನ್ನ RCB ತಂಡ ಮಾರಾಟ?

Royal Challengers Bengaluru (RCB): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಒಂದು ವಾರದಿಂದ ಸದಾ ಸುದ್ದಿಯಲ್ಲಿದೆ. ಇದಕ್ಕೆ ಒಂದು ಕಾರಣ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಪ್ರಕರಣ. ಇದರ ನಡುವೆ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿರುವ ವಿಚಾರವೊಂದು ಬಹಿರಂಗವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಕಠಿಣ ನಿಯಮವೊಂದು ಜಾರಿಯಾಗುವ ಸಾಧ್ಯತೆಯಿದೆ. ಈ ನಿಯಮ ಜಾರಿಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸಂಕಷ್ಟ ಎದುರಾಗುವುದು ಖಚಿತ. ಅದಕ್ಕೂ ಮುನ್ನವೇ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಸಮಾಲೋಚಿಸಿದೆ ಎಂದು ವರದಿಯಾಗಿದೆ.
ಅಷ್ಟಕ್ಕೂ ಐಪಿಎಲ್ನಲ್ಲಿ ಜಾರಿಯಾಗಲಿರುವ ಹೊಸ ನಿಯಮವೆಂದರೆ... ತಂಬಾಕು ಮತ್ತು ಆಲ್ಕೋಹಾಲ್ ಬ್ರ್ಯಾಂಡ್ಗಳ ಜಾಹೀರಾತು ನಿಷೇಧ. ಅಂದರೆ ಟೂರ್ನಿಯಲ್ಲಿ ತಂಬಾಕು ಮತ್ತು ಮದ್ಯ ಜಾಹೀರಾತಿನ ಪ್ರಚಾರ ನಿಷೇಧಿಸಲು ಆರೋಗ್ಯ ಸಚಿವಾಲಯ ಚಿಂತಿಸುತ್ತಿದೆ. ಈ ನಿಯಮ ಜಾರಿಯಾದರೆ ಆರ್ಸಿಬಿ ತಂಡಕ್ಕೆ ಸಮಸ್ಯೆ ಎದುರಾಗಲಿದೆ.
ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಹೊಂದಿದೆ.

ಇತ್ತ ಐಪಿಎಲ್ನಲ್ಲಿ ಅನಾರೋಗ್ಯಕರ ವಸ್ತುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಮಾಡದಂತಹ ನಿಯಮವನ್ನು ಜಾರಿಗೆ ತರುವ ಬಗ್ಗೆ ಚಿಂತಿಸಲಾಗಿದೆ.
