ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಉತ್ತರವಾಗಿ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ರಾಹುಲ್ ಗಾಂಧಿಗೆ ಅಧಿಕೃತ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ಸಾಕ್ಷ್ಯ ಸಹಿತ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದ್ದಾರೆ. ತಪ್ಪು ಮಾಹಿತಿ ನೀಡಿದರೆ ಕಠಿಣ ಶಿಕ್ಷೆಯ ಎಚ್ಚರಿಕೆಯೂ ನೀಡಲಾಗಿದೆ.
ತಪ್ಪು ಮಾಹಿತಿ ನೀಡಿದರೆ 1950ರ RP Act ಸೆಕ್ಷನ್ 31 ಮತ್ತು 2023ರ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 227 ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬಳಿಕ, ಆಗಸ್ಟ್ 8ರಂದು ಕಾಂಗ್ರೆಸ್ ನಿಯೋಗ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಈ ಕುರಿತು ಮತ್ತಷ್ಟು ಚರ್ಚೆ ನಡೆಸುವ ನಿರೀಕ್ಷೆಯಿದೆ.
ಚುನಾವಣಾ ಆಯೋಗ ಹೇಳಿರುವ ಪ್ರಕಾರ, ಪ್ರತೀ ಬಾರಿ ಮತದಾರರ ಪಟ್ಟಿಗಳನ್ನು ಸುತ್ತೋಲೆಗಳಿಗೆ ಅನುಸಾರವಾಗಿ ಪಾರದರ್ಶಕವಾಗಿ ತಯಾರಿಸಲಾಗುತ್ತದೆ. ಇದನ್ನು 1950ರ ಪ್ರತಿನಿಧಿ ಕಾಯ್ದೆ ಮತ್ತು 1960ರ ಮತದಾರರ ನೊಂದಾವಣೆ ನಿಯಮಗಳಂತೆ ಮಾಡಲಾಗುತ್ತದೆ. 2024ರ ನವೆಂಬರ್‌ನಲ್ಲಿ ಕರಡು ಪಟ್ಟಿಯನ್ನು ಮತ್ತು 2025ರ ಜನವರಿಯಲ್ಲಿ ಅಂತಿಮ ಪಟ್ಟಿಯನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಕ್ಷೇಪಣೆಗಳು ಸಲ್ಲಿಸಲ್ಪಟ್ಟಿಲ್ಲ. ಪಟ್ಟಿಯಲ್ಲಿ ಏನಾದರೂ ತಪ್ಪು ಇದ್ದಿದ್ದರೆ, ಅದನ್ನು ತಕ್ಷಣವೇ ಸೂಚಿಸಬಹುದಾಗಿತ್ತು.
ಅಲ್ಲದೇ ಅಗಸ್ಟ್ 8ರಂದು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಕಾಂಗ್ರೆಸ್ ನಾಯಕರು ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಮಯ ಮೀಸಲಾಗಿದೆ. ಈ ಬಗ್ಗೆ ಆಗಲೇ ಕೆಪಿಸಿಸಿ ಪತ್ರಗಳನ್ನು ಕಳುಹಿಸಿತ್ತು ಮತ್ತು ಆಯೋಗದ ಕಚೇರಿ ಪತ್ರದ ಮೂಲಕ ದಿನಾಂಕ ದೃಢಪಡಿಸಿದೆ.
ಪತ್ರದಲ್ಲಿ, ಚುನಾವಣೆಯ ಫಲಿತಾಂಶವನ್ನೇ ಪ್ರಶ್ನೆ ಮಾಡಬೇಕಾದರೆ, ಕೇವಲ ಹೈಕೋರ್ಟ್‌ನಲ್ಲಿ ಚುನಾವಣಾ ಪಿಟಿಷನ್ ನೀಡಬೇಕಾಗುತ್ತದೆ ಎಂಬುದೂ ಹೇಳಲಾಗಿದೆ. ಅದೇ ವೇಳೆ, ರಾಹುಲ್ ಗಾಂಧಿ ಅವರು ಆಗಸ್ಟ್ 7ರಂದು ಪತ್ರಿಕಾಗೋಷ್ಠಿಯಲ್ಲಿ ತಪ್ಪು ಮತದಾರರನ್ನು ಸೇರಿಸಲಾಗಿದೆ ಮತ್ತು ಸತ್ಯ ಮತದಾರರನ್ನು ಹೊರಗಿಡಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಸಾಕ್ಷ್ಯ ನೀಡುವಂತೆ ಮುಖ್ಯ ಚುನಾವಣಾಧಿಕಾರಿಗಳು ಕೇಳಿದ್ದಾರೆ. ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ..ರಾಹುಲ್ ಗಾಂಧಿ ದಾಖಲೆ ಬಿಡುಗಡೆ!
ಈ ಕಾರಣಕ್ಕಾಗಿ, 1960ರ ಮತದಾರರ ನೊಂದಾವಣೆ ನಿಯಮಗಳ 20(3)(b) ಪ್ರಕಾರ ಪ್ರಮಾಣ ಪತ್ರದ ಮಾದರಿ ಕೂಡ ರಾಹುಲ್ ಗಾಂಧಿಗೆ ಕಳುಹಿಸಲಾಗಿದೆ. ಈ ಮಾದರಿಯಲ್ಲಿ, ಯಾರ ಹೆಸರು ಸೇರಬೇಕು ಅಥವಾ ತೆಗೆದು ಹಾಕಬೇಕು ಎಂದು ತಿಳಿಸಬೇಕು, ಜೊತೆಗೆ ಪಟ್ಟಿ ಭಾಗ ಸಂಖ್ಯೆ ಮತ್ತು ಕ್ರಮಾಂಕವೂ ನಮೂದಿಸಬೇಕು. ಇದು ಸಲ್ಲಿಸಿದ ಬಳಿಕವೇ, ಆಯೋಗ ಕ್ರಮ ಕೈಗೊಳ್ಳಬಹುದಾಗುತ್ತದೆ.