ರಕ್ಷಾ ಬಂಧನದಂದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗಿದ್ದು, ನಗರದ ಹಲವು ಭಾಗಗಳಲ್ಲಿ ಜಲಾವೃತವಾಗಿದೆ, ಇದರಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ದೆಹಲಿ-NCR ಗೆ ರೆಡ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆ, ಗುಡುಗು ಮತ್ತು ಮಿಂಚಿನ ಎಚ್ಚರಿಕೆ ನೀಡಿದೆ. ಶಾಸ್ತ್ರಿ ಭವನ, ಆರ್ಕೆ ಪುರಂ, ಮೋತಿ ಬಾಗ್, ಕಿದ್ವಾಯಿ ನಗರ, ಪಂಚಕುಯಿಯನ್ ಮಾರ್ಗ, ಮಿಂಟೋ ರಸ್ತೆ ಮತ್ತು ಮಥುರಾ ರಸ್ತೆಯಂತಹ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ಮಾಡಲು ಕಷ್ಟವಾಗಿದೆ.
ಮಳೆಯು ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಆರಂಭವಾಗಿ ಶನಿವಾರ ಬೆಳಿಗ್ಗೆಯವರೆಗೆ ಮಳಡ ಸುರಿದಿದೆ. IMD ಪ್ರಕಾರ, ಶನಿವಾರ ಗರಿಷ್ಠ ತಾಪಮಾನ 32-36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24-27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸಫ್ದರ್ಜಂಗ್ ಹವಾಮಾನ ಕೇಂದ್ರವು 78.7 ಮಿಮೀ ಮಳೆಯನ್ನು ದಾಖಲಿಸಿದ್ದು, ಪ್ರಗತಿ ಮೈದಾನದಲ್ಲಿ 100 ಮಿಮೀ, ಲೋಧಿ ರಸ್ತೆಯಲ್ಲಿ 80 ಮಿಮೀ ಮಳೆಯಾಗಿದೆ.
ಈ ಭಾರೀ ಮಳೆಯಿಂದಾಗಿ ರಕ್ಷಾಬಂಧನದ ಆಚರಣೆಗೆ ತೊಂದರೆಯಾಗಿದ್ದು, ಜನರು ಹೊರಗಡೆ ಸಂಚರಿಸಲು ಆಗದೆ ತೊಂದರೆ ಅನುಭವಿಸುತ್ತಿದ್ದಾರೆ.ಇದರ ಜೊತೆಗೆ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು ತಡವಾಗಿವೆ. ಏರ್ ಇಂಡಿಯಾ ಮತ್ತು ಇಂಡಿಗೋ ಏರ್ಲೈನ್ಸ್ಗಳು ಪ್ರಯಾಣಿಕರಿಗೆ ಸಲಹೆಯನ್ನು ನೀಡಿವೆ, ರಸ್ತೆಗಳೆಲ್ಲಾ ಜಲಾವೃತದಿಂದಾಗಿ ಸಂಚಾರ ವಿಳಂಬವಾಗಬಹುದಾದ್ದರಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಂಡು ಬರಲು ಸೂಚಿಸಿದೆ. IMD ಆಗಸ್ಟ್ 12 ರವರೆಗೆ ಮಳೆ ಮತ್ತು ಗುಡುಗು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.