ರಣ ಮಳೆಯ ಆರ್ಭಟಕ್ಕೆ ದೆಹಲಿಯಲ್ಲಿ ಎಂಟು ಮಂದಿ ಅಸುನೀಗಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ, ಗೋಡೆ ಕುಸಿದ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಪಟ್ಟಿಯಲ್ಲಿ ಶಬೀಬುಲ್ (30), ರಬೀಬುಲ್ (30), ಮುತ್ತು ಅಲಿ (45), ರುಬಿನಾ (25), ಡಾಲಿ (25), ಹಶಿಬುಲ್, ರುಖ್ಯಾನಾ (6), ಹಸೀನಾ (7) ಎಂಬವರು ಸೇರಿದ್ದಾರೆ.
ಈ ಪ್ರದೇಶದಲ್ಲಿ ಗುಜರಿ ವ್ಯಾಪಾರಿಗಳು ಹಳೆಯ ದೇವಸ್ಥಾನದ ಬಳಿ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಮಳೆ ಬಹಳ ಭಾರಿಯಾಗಿ ಸುರಿದಿದ್ದು, ಶನಿವಾರ ಬೆಳಿಗ್ಗೆ ಕೂಡ ಮಳೆ ನಿಂತಿಲ್ಲ. ಬೆಳಿಗ್ಗೆ ಸುಮಾರು 9 ಗಂಟೆಗೆ ಗೋಡೆ ಕುಸಿದು ಬಿದ್ದಿದ್ದು, ಅಲ್ಲಿ ಇದ್ದವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು.
ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಕೂಡಲೇ ಕಾರ್ಯಾಚರಣೆ ನಡೆಸಿದರು. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ 8 ಜನ ಮೃತಪಟ್ಟಿದ್ದಾರೆ. ಈ ಘಟನೆ ನಂತರ ಅಪಾಯದಲ್ಲಿದ್ದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಐಶ್ವರ್ಯ ಶರ್ಮಾ ಮಾಹಿತಿ ನೀಡಿದ್ದಾರೆ.