ದಸರಿಘಟ್ಟ ಚೌಡೇಶ್ವರಿ ದೇವಾಲಯವು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲದೆ. ಈ ದೇವಾಲಯವು ಶಕ್ತಿ ದೇವತೆಯಾದ ಚೌಡೇಶ್ವರಿ ದೇವಿಗೆ ಸಮರ್ಪಿತವಾಗಿದ್ದು, ಶತಮಾನಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯದ ವಿಶೇಷತೆಯೆಂದರೆ, ಭಕ್ತರು ಕೇಳಿದ ಪ್ರಶ್ನೆಗಳಿಗೆ ದೇವಿಯ ಪಂಚಲೋಹ ವಿಗ್ರಹವು ಅಕ್ಕಿ ಅಥವಾ ರಾಗಿ ಹಿಟ್ಟಿನ ಮೇಲೆ ಕನ್ನಡದಲ್ಲಿ ಉತ್ತರ ಬರೆಯುತ್ತದೆ ಎಂಬ ನಂಬಿಕೆ.
ದೇವಾಲಯದ ಇತಿಹಾಸ: ನೂರಾರು ವರ್ಷಗಳ ಹಿಂದೆ, ರಾಯಚೂರು ಜಿಲ್ಲೆಯ ತುಂಗಾ ನದಿಯ ತೀರದಲ್ಲಿ ನಂದಾವರ ಎಂಬ ಸಾಮ್ರಾಜ್ಯವಿತ್ತು. ಈ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಜನು ಶಕ್ತಿ ದೇವತೆಯ ಉಪಾಸಕನಾಗಿದ್ದನು. ಆತನಿಗೆ ಮಂತ್ರ ಶಕ್ತಿಯ ಜ್ಞಾನವಿತ್ತು, ಇದರಿಂದ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಕಾಶಿಗೆ ತೆರಳಿ, ಗಂಗೆಯಲ್ಲಿ ಸ್ನಾನ ಮಾಡಿ, ಸಾಯಂಕಾಲದೊಳಗೆ ತನ್ನ ರಾಜ್ಯಕ್ಕೆ ಮರಳುತ್ತಿದ್ದನು. ಈ ವಿಷಯ ರಾಣಿಗೆ ಅನುಮಾನವನ್ನುಂಟುಮಾಡಿತು. ರಾಜನು ತನ್ನ ದೈನಂದಿನ ಚಟುವಟಿಕೆಯನ್ನು ರಾಣಿಗೆ ವಿವರಿಸಿದಾಗ, ಆಕೆ ಒಂದು ದಿನ ಕಾಶಿಯಾತ್ರೆಯನ್ನು ಕಣ್ಣಾರೆ ಕಾಣಬೇಕೆಂದು ಒತ್ತಾಯ ಮಾಡುತ್ತಾಳೆ.
ರಾಜನು ರಾಣಿಯನ್ನು ಕಾಶಿಗೆ ಕರೆದೊಯ್ದನು, ಆದರೆ ಆ ಸಮಯದಲ್ಲಿ ರಾಣಿಯು ಮುಟ್ಟಾಗಿ ಬಿಡುತ್ತಾಳೆ. ಇದರಿಂದ ರಾಜನ ಮಂತ್ರ ಶಕ್ತಿಯು ಕ್ಷೀಣಿಸಿತು, ಮತ್ತು ಅವನಿಗೆ ರಾಜ್ಯಕ್ಕೆ ಮರಳಲು ಸಾಧ್ಯವಾಗಲಿಲ್ಲ. ಗಂಗೆಯ ದಡದಲ್ಲಿ ಚಿಂತೆಯಿಂದ ಅಲೆಯುತ್ತಿರುವಾಗ, ಚಂಡಿಯಾಗ ನಡೆಸುತ್ತಿದ್ದ ಬ್ರಾಹ್ಮಣರ ಗುಂಪನ್ನು ಭೇಟಿಯಾಗುತ್ತಾನೆ, ಬೇಟಿಯಾಗಿ ಆಗಿರುವ ಸಮಸ್ಯೆಯನ್ನು ಹೇಳಿಕೊಲ್ಳುತ್ತಾನೆ. ಆಗ ಬ್ರಾಹ್ಮಣರು ತಮ್ಮ ಪುಣ್ಯದ ಕೆಲವು ಭಾಗವನ್ನು ರಾಜನಿಗೆ ವರ್ಗಾಯಿಸಿ, ರಾಣಿಯನ್ನು ಪವಿತ್ರಗೊಳಿಸಿ, ರಾಜ್ಯಕ್ಕೆ ಮರಳಲು ಸಹಾಯ ಮಾಡಿದರು. ಬದಲಿಗೆ, ರಾಜನು ಜಹಾಗೀರುಗಳನ್ನು ದಾನವಾಗಿ ನೀಡುವುದಾಗಿ ಭರವಸೆ ನೀಡಿದನು.
ವರ್ಷಗಳ ನಂತರ, ಕಾಶಿಯಲ್ಲಿ ತೀವ್ರ ಕ್ಷಾಮ ಉಂಟಾದಾಗ, ಬ್ರಾಹ್ಮಣರು ರಾಜನ ಭರವಸೆಯನ್ನು ನೆನಪಿಸಲು ನಂದಾವರಕ್ಕೆ ಬರುತ್ತಾರೆ. ಆದರೆ ರಾಜನು ತನ್ನ ಭರವಸೆಯನ್ನು ಮರೆತು, ಬ್ರಾಹ್ಮಣರನ್ನು ನಿಂದಿಸಿದನು. ಇದರಿಂದ ಅವನ ಎಲ್ಲಾ ಕಾರ್ಯಗಳು ವಿಫಲವಾದವು. ಬ್ರಾಹ್ಮಣರು ಚೌಡೇಶ್ವರಿ ದೇವಿಯನ್ನು ಪ್ರಾರ್ಥಿಸಿ, ರಾಜನ ಭರವಸೆಗೆ ಸಾಕ್ಷಿಯಾಗಿ ನಂದಾವರಕ್ಕೆ ಬರಲು ಕೋರಿದರು. ದೇವಿಯು ಅವರ ಕೋರಿಕೆಯಂತೆ ನಂದಾವರಕ್ಕೆ ಆಗಮಿಸಿದಳು.
ರಾಜನಿಗೆ ತನ್ನ ತಪ್ಪಿನ ಅರಿವಾಗಿ, ಕ್ಷಮೆಯಾಚಿಸಿ, ಬ್ರಾಹ್ಮಣರಿಗೆ ಭೂಮಿ, ಧನ ಮತ್ತು ಧಾನ್ಯಗಳನ್ನು ದಾನವಾಗಿ ನೀಡಿದನು. ಆಗಿನಿಂದ ಚೌಡೇಶ್ವರಿ ದೇವಿಯು ನಂದಾವರದಲ್ಲಿ ಕುಲದೇವತೆಯಾಗಿ ಪೂಜಿತಳಾದಳು. ಸುಮಾರು 300 ವರ್ಷಗಳ ಹಿಂದೆ, ತಿಪಟೂರಿನ ಬಳಿ ಜಸವಂತರಾಯ ಎಂಬ ಪಾಳೆಯಗಾರನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಚೌಡೇಶ್ವರಿ ದೇವಿಯನ್ನು ಪ್ರಾರ್ಥಿಸಿದನು.
ದೇವಿಯು ಅವನಿಗೆ ತನ್ನ ಯಾತ್ರೆಯಲ್ಲಿ ರಕ್ಷಕಿಯಾಗಿರುವುದಾಗಿ ಒಪ್ಪಿಕೊಂಡಳು, ಆದರೆ ತಾನು ಆಯ್ಕೆ ಮಾಡಿದ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸುವ ಷರತ್ತನ್ನು ವಿಧಿಸಿದಳು. ಜಸವಂತರಾಯನು ತನ್ನ ಯಾತ್ರೆಯಲ್ಲಿ ಯಶಸ್ವಿಯಾದನು, ಮತ್ತು ದೇವಿಯು ಒಂದು ಸುಂದರವಾದ ಪ್ರದೇಶವನ್ನು ಆಯ್ಕೆ ಮಾಡಿ, ಅಲ್ಲಿ ನೆಲೆಸಿದಳು. ಈ ಸ್ಥಳವೇ ಜಸವಂತರಾಯ ಟೌನ್ ಎಂದು ಪ್ರಖ್ಯಾತಿಯಾಗಿದೆ, ಇದು ಈಗ ದಸರಿಘಟ್ಟ ಎಂದು ಗುರುತಿಸಲ್ಪಟ್ಟಿದೆ.
ಇದನ್ನೂ ಓದಿ: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: 15ನೇ ಸ್ಥಳದಲ್ಲಿ ಎಸ್‌ಐಟಿಗೆ ಪ್ರಮುಖ ಸುಳಿವು, ತನಿಖೆಗೆ ಹೊಸ ತಿರುವು...
ದೇವಾಲಯದ ವಿಶೇಷತೆ:
ಪಂಚಲೋಹ ವಿಗ್ರಹ: ಭಕ್ತರು ತಮ್ಮ ಪ್ರಶ್ನೆಗಳನ್ನು ಯಾವುದೇ ಭಾಷೆಯಲ್ಲಿ (ಕನ್ನಡ, ಹಿಂದಿ, ಇಂಗ್ಲಿಷ್, ಕೊಂಕಣಿ, ತೆಲುಗು) ಕೇಳಬಹುದು. ಪೂಜಾರಿಗಳು ದೇವಿಯ ಪಂಚಲೋಹ ವಿಗ್ರಹವನ್ನು ಅಕ್ಕಿ ಅಥವಾ ರಾಗಿ ಹಿಟ್ಟಿನ ಮೇಲೆ ಇಡುತ್ತಾರೆ, ಮತ್ತು ಕಲಶವನ್ನು ತಿರುಗಿಸಿದಾಗ, ಉತ್ತರವು ಕನ್ನಡದಲ್ಲಿ ಅಕ್ಷರ ರೂಪದಲ್ಲಿ ಮೂಡುತ್ತದೆ ಎಂಬ ನಂಬಿಕೆಯಿದೆ.
ನವರಾತ್ರಿ ಉತ್ಸವ: ದೇವಾಲಯದಲ್ಲಿ ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆ ಮತ್ತು ಮುಳ್ಳುಗದ್ದುಗೆ ಉತ್ಸವವನ್ನು ಆಚರಿಸಲಾಗುತ್ತದೆ. ವಿಜಯದಶಮಿಯಂದು ಈ ಉತ್ಸವವು ವಿಶೇಷವಾಗಿ ನಡೆಯುತ್ತದೆ.
ವಾಸ್ತುಶಿಲ್ಪ: ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಗೋಪುರ, ಯಜ್ಞ-ಮಂಟಪ, ಮತ್ತು ವಾಹನ-ಮಂಟಪಗಳನ್ನು ಒಳಗೊಂಡಿದೆ.
ವಿಶಿಷ್ಟ ಗಿಡ: ದೇವಾಲಯದ ಮುಂಭಾಗದಲ್ಲಿ ಎತ್ತರವಾದ ಈಚಲು ಮರ (ವೈಲ್ಡ್ ಡೇಟ್ ಟ್ರೀ) ಮತ್ತು ಸಾಮಿವೃಕ್ಷವು ವಿಶೇಷ ಆಕರ್ಷಣೆಯಾಗಿದೆ.
ದೇವಾಲಯದ ಮಹತ್ವ: ಚೌಡೇಶ್ವರಿ ದೇವಿಯು ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುವವಳು ಎಂದು ಪ್ರಸಿದ್ಧಳಾಗಿದ್ದಾಳೆ. ಕರ್ನಾಟಕದಿಂದ ಮಾತ್ರವಲ್ಲ, ದೇಶ-ವಿದೇಶಗಳಿಂದಲೂ ಕೂಡ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಸಾವಿರಾರು ಭಕ್ತರು ತಮ್ಮ ಕಷ್ಟಗಳಿಗೆ ಉತ್ತರವನ್ನು ಪಡೆದುಕೊಂಡಿದ್ದಾರೆ ಎಂಬ ನಂಬಿಕೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಕೆಲವು ವರ್ಷಗಳ ಹಿಂದೆ ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ವಾರದ ದಿನಗಳು ಮತ್ತು ವಾರಾಂತ್ಯ (ಮಂಗಳವಾರ ಹೊರತುಪಡಿಸಿ): ಬೆಳಗ್ಗೆ 9:00 ರಿಂದ ರಾತ್ರಿ 9:00 ರವರೆಗೆ
ಮಂಗಳವಾರ: ಬೆಳಗ್ಗೆ 9:00 ರಿಂದ 9:30 ಮತ್ತು ಮಧ್ಯಾಹ್ನ 12:00 ರಿಂದ ರಾತ್ರಿ 9:00 ರವರೆಗೆ
ಈ ದೇವಾಲಯವು ಆದಿಚುಂಚನಗಿರಿ ಮಠದ ಅಧೀನದಲ್ಲಿದ್ದು, ಭಕ್ತರಿಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸೇವೆಗಳನ್ನು ಒದಗಿಸುತ್ತದೆ.