ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಆಗಸ್ಟ್ 18, 2025ರ ಸೋಮವಾರದಂದು ಮೆಟ್ರೋ ಸೇವೆಗಳು ಬೆಳಗ್ಗೆ 5 ಗಂಟೆಯಿಂದಲೇ ಆರಂಭವಾಗಲಿವೆ. ಇದು ಸ್ವಾತಂತ್ರ್ಯ ದಿನಾಚರಣೆ ಮತ್ತು ವಾರಾಂತ್ಯದ ನಂತರ ಬೆಂಗಳೂರಿಗೆ ವಾಪಸ್ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿಂದಾಗಿ ಕೈಗೊಂಡ ವಿಶೇಷ ವ್ಯವಸ್ಥೆಯಾಗಿದೆ.
ಸಮಯ ಬದಲಾವಣೆ: ಸಾಮಾನ್ಯವಾಗಿ ಹಳದಿ ಮಾರ್ಗದ ರೈಲು ಸೇವೆಗಳು ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗುತ್ತವೆ, ಆದರೆ ಸೋಮವಾರದಂದು ಮಾತ್ರ ಈ ಸೇವೆಗಳು ಬೆಳಗ್ಗೆ 5:00 ಗಂಟೆಗೆ ಆರಂಭವಾಗುತ್ತವೆ.
ಎರಡೂ ಟರ್ಮಿನಲ್ಗಳಿಂದ ಸೇವೆ: ಆರ್.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಬೆಳಿಗ್ಗೆ 5 ಗಂಟೆಗೆ ಮೊದಲ ರೈಲು ಹೊರಡಲಿದೆ.
ಈ ವಿಶೇಷ ವ್ಯವಸ್ಥೆಯು ಕೇವಲ ಆಗಸ್ಟ್ 18 ರ ಸೋಮವಾರಕ್ಕೆ ಮಾತ್ರ ಅನ್ವಯಿಸುತ್ತದೆ. ಆಗಸ್ಟ್ 19, ಮಂಗಳವಾರದಿಂದ ಮೆಟ್ರೋ ಸೇವೆಗಳು ಎಂದಿನಂತೆ ಬೆಳಗ್ಗೆ 6:30ಕ್ಕೆ ಪ್ರಾರಂಭವಾಗಲಿವೆ.
ನೇರಳೆ ಮತ್ತು ಹಸಿರು ಮಾರ್ಗಗಳ ಮೆಟ್ರೋ ಸೇವೆಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ.
ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣ ದರ ₹60 ಆಗಿದೆ. ಟೋಕನ್ಗಳು, ಸ್ಮಾರ್ಟ್ ಕಾರ್ಡ್ಗಳು ಮತ್ತು ಕ್ಯೂಆರ್ ಟಿಕೆಟ್ಗಳು ಎಂದಿನಂತೆ ಲಭ್ಯವಿವೆ.
ಹಳದಿ ಮಾರ್ಗವು (ಆರ್.ವಿ. ರಸ್ತೆ-ಬೊಮ್ಮಸಂದ್ರ) ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಆರಂಭದಿಂದ ಬೆಂಗಳೂರಿನಲ್ಲಿ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಹಳದಿ ಮಾರ್ಗದಲ್ಲಿ ಪ್ರತಿ 25 ನಿಮಿಷಗಳಿಗೆ ಒಂದು ರೈಲು ಸಂಚರಿಸುತ್ತದೆ. ಭವಿಷ್ಯದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾದಂತೆ ರೈಲುಗಳ ಮಧ್ಯದ ಅಂತರವನ್ನು ಕಡಿಮೆ ಮಾಡಲು ಬಿಎಂಆರ್ಸಿಎಲ್ ಯೋಜನೆ ರೂಪಿಸಿದೆ.