ಖ್ಯಾತ ನಟಿ ಸುಧಾರಾಣಿ ಅವರ ಮಗಳು ನಿಧಿ, ಚಿತ್ರರಂಗ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಹಲವರಲ್ಲಿತ್ತು. ಆದರೆ, ನಿಧಿ ಸಿನಿಮಾ ಕ್ಷೇತ್ರಕ್ಕೆ ಬರುವ ಬದಲು ತಮ್ಮ ಕಾನೂನು ವೃತ್ತಿಯಲ್ಲೇ ಮುಂದುವರಿಯಲು ಆಸಕ್ತಿ ಹೊಂದಿದ್ದಾರೆ ಎಂದು ಸುಧಾರಾಣಿ ಸ್ಪಷ್ಟಪಡಿಸಿದ್ದಾರೆ. ಅಮ್ಮನಂತೆ ಮಗಳು ನಟನೆಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸುಧಾರಾಣಿ, "ನಿಧಿ ಲಾಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದಾಳೆ. ಸದ್ಯಕ್ಕೆ ಅವಳಿಗೆ ಚಿತ್ರರಂಗ ಪ್ರವೇಶಿಸುವ ಉದ್ದೇಶವಿಲ್ಲ, ನನಗೂ ಅಂತಹ ಆಸೆಯಿಲ್ಲ. ಅವಳು ತನ್ನ ಕಾನೂನು ವೃತ್ತಿಯನ್ನು ಮುಂದುವರಿಸಲು ಬಯಸುತ್ತಾಳೆ. ಜೊತೆಗೆ, ಹೆಚ್ಚಿನ ಕೋರ್ಸ್‌ಗಳನ್ನು ಮಾಡುತ್ತಾ ಓದುತ್ತಿದ್ದಾಳೆ. ಅವಳು ನೃತ್ಯದಲ್ಲೂ ಸಕ್ರಿಯಳಾಗಿದ್ದು, ಈ ಎಲ್ಲದರಲ್ಲೂ ಅವಳು ಖುಷಿಯಾಗಿದ್ದಾಳೆ. ಅವಳ ಸಂತೋಷದಲ್ಲಿ ನನಗೂ ಖುಷಿ ಇದೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೊಸ ಮನೆ ಮಾಡಿದ್ರಂತೆ ರಿಯಾಲಿಟಿ ಶೋ ಖ್ಯಾತಿಯ ದೀಪಿಕಾ! ಮನೆ ಹೆಸರು ಕೇಳಿದ್ರೆ ಶಾಕ್!
ಪ್ರಸ್ತುತ ಸುಧಾರಾಣಿ, ʻನಿದ್ರಾದೇವಿ ನೆಕ್ಸ್ಟ್ ಡೋರ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ಅವರು, "ಇತ್ತೀಚೆಗೆ ಕೆಲವು ಚಿತ್ರಗಳಲ್ಲಿ ಪಾತ್ರಗಳು ಹೇಳಿದಂತೆ ತೆರೆ ಮೇಲೆ ಮೂಡಿಬರುತ್ತಿಲ್ಲ ಎಂಬ ಸಣ್ಣ ಆತಂಕವಿತ್ತು. ಆದರೆ, ಈ ನಿರ್ದೇಶಕರು ಕಥೆ ಹೇಳಿದಾಗ, ಅದು ವಿಭಿನ್ನವಾಗಿತ್ತು, ವಾಣಿಜ್ಯ ಸ್ವರೂಪಕ್ಕಿಂತ ಭಿನ್ನವಾಗಿ ಕಥೆ ಇಷ್ಟವಾಯಿತು. ಹೇಳಿದಂತೆಯೇ ಸಿನಿಮಾ ಮೂಡಿಬಂದಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಬೆಳವಣಿಗೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಸುಧಾರಾಣಿ, "ಇತ್ತೀಚೆಗೆ ಕನ್ನಡ ಸಿನಿಮಾಗಳು ಸವಾಲುಗಳನ್ನು ಎದುರಿಸುತ್ತಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಕನ್ನಡ ಸಿನಿಮಾಗಳು ಮತ್ತೆ ಉತ್ತಮವಾಗಿ ಮೂಡಿಬರುತ್ತಿದ್ದು, ಇದು ಅತೀವ ಸಂತಸ ತಂದಿದೆ" ಎಂದಿದ್ದಾರೆ. ಅಲ್ಲದೆ, 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲೂ ಅವರು ಸಕ್ರಿಯರಾಗಿದ್ದಾರೆ.