Skip to main content
ವಿಡಿಯೋ
crime

ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

By Gireesh Vasishta
ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿರುದ್ಧ ಅವಹೇಳನ ಆರೋಪದ ಪ್ರಕರಣದಲ್ಲಿ ತಿಮರೋಡಿ ಮಹೇಶ್ ಶೆಟ್ಟಿಗೆ ಉಡುಪಿ ನ್ಯಾಯಾಲಯ ಶರತ್ತುಬದ್ಧ ಜಾಮೀನು ನೀಡಿದೆ. ದಿನವಿಡೀ ನಡೆದ ನಾಟಕೀಯ ವಿಚಾರಣೆಯ ನಂತರ ತೀರ್ಪು ಹೊರಬಂದಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಉಡುಪಿ ನ್ಯಾಯಾಲಯವು ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ನಾಯಕರೂ ಆಗಿರುವ ತಿಮರೋಡಿ ಅವರನ್ನು ಗುರುವಾರ ಬಂಧಿಸಲಾಗಿತ್ತು.

 

ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ್ ಎನ್.ಎ. ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ದಿನವಿಡೀ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಈ ತೀರ್ಪು ಬಂದಿದೆ.

 

ಶನಿವಾರ ಬೆಳಗ್ಗೆ 11:30ಕ್ಕೆ ತಿಮರೋಡಿ ಅವರ ಜಾಮೀನು ಅರ್ಜಿಯ ವಿಚಾರಣೆ ಆರಂಭವಾಯಿತು. ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರೆ, ದೂರುದಾರರ ಪರ ವಕೀಲ ಶಂಭು ಶರ್ಮಾ ಅವರು ವಕಾಲತ್ತು ಸಲ್ಲಿಸಿ, ಅಭಿಯೋಜನೆಗೆ ಸಹಕರಿಸಲು ಅನುಮತಿ ಕೇಳಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ನ್ಯಾಯಾಲಯವು ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿತು.

 

ನಂತರ, ದೂರುದಾರ ರಾಜೀವ್ ಕುಲಾಲ್ ಪರವಾಗಿ ಹೈಕೋರ್ಟ್‌ನ ವಕೀಲರು ಹಾಜರಾಗಿ ವಾದ ಮಂಡಿಸಿದರು. ಈ ಸಂದರ್ಭದಲ್ಲಿ, ಸರ್ಕಾರಿ ಅಭಿಯೋಜಕರು ಮಹೇಶ್‌ ಶೆಟ್ಟಿ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಆಗ ನ್ಯಾಯಾಧೀಶರು, ಮಧ್ಯಾಹ್ನ 1 ಗಂಟೆಯೊಳಗೆ ತಿಮರೋಡಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸುಜಾತ ಭಟ್‌ ಹೇಳಿದ ಸುಳ್ಳುಗಳು: ಇನ್‌ಸೈಟ್‌ ರಷ್‌ ನ್ಯೂಸ್‌ ಪ್ರತಿನಿಧಿ-ಸುಜಾತ ಭಟ್‌ ರವರ ನಡುವೆ ನಡೆದ ಮಾತುಕತೆ, ಇಲ್ಲಿದೆ.

 

ನ್ಯಾಯಾಲಯದ ಸೂಚನೆಯಂತೆ, ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಬಗಿ ನೇತೃತ್ವದ ತಂಡವು ತಿಮರೋಡಿ ಅವರನ್ನು ಬಿಗಿ ಬಂದೋಬಸ್ತ್‌ನಲ್ಲಿ ನ್ಯಾಯಾಲಯಕ್ಕೆ ಕರೆತಂದಿತು. ಕಸ್ಟಡಿಗೆ ಅರ್ಜಿ ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ನಿಮ್ಮ ಕಡೆಯಲ್ಲೇ ವೈಫಲ್ಯಗಳಿರುವಾಗ ಮತ್ತೆ ಕಸ್ಟಡಿಗೆ ಏಕೆ ಬೇಕು? ಎಂದು ಪ್ರಶ್ನಿಸಿದರು.