ಮಂಡ್ಯ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಗೆ ವಿದೇಶಿ ಫಂಡಿಂಗ್ ಬೆಂಬಲವಿರುವ ಅನುಮಾನವಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸತ್ಯಾಸತ್ಯತೆ ಹೊರತರಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಅಗತ್ಯ ಎಂದು ಅವರು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಧರ್ಮಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಲು ಒಳಸಂಚು ರೂಪಿಸಲಾಗಿದೆ. ರಾಜ್ಯದ ಜನತೆಗೆ ಎಸ್‌ಐಟಿ ತನಿಖೆಯ ಮೇಲೆ ನಿರೀಕ್ಷೆಯಿಲ್ಲ. ಎನ್‌ಐಎ ತನಿಖೆಗೆ ವಹಿಸಿದರೆ ಈ ಷಡ್ಯಂತ್ರಗಳು ಬಯಲಾಗುತ್ತವೆ ಎಂದು ನಿಖಿಲ್ ಕುಮಾರಸ್ವಾಮಿ ವಿವರಿಸಿದರು.
ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದೆ. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಸನಕ್ಕೆ ತೆರಳಲಿದ್ದು, ಅಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದೆ. ನಂತರ ಧರ್ಮಸ್ಥಳದ ನೇತ್ರಾವತಿ ನದಿಗೆ ತೆರಳಿ, ಸ್ನಾನ ಮಾಡಿದ ಬಳಿಕ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಲಾಗುವುದು.
ಈ ಯಾತ್ರೆಯಲ್ಲಿ ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗವಹಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.