ಬೆಂಗಳೂರು ನಗರದಲ್ಲಿ ಬಿಬಿಎಂಪಿ ವಿಸರ್ಜನೆಯ ನಂತರ ಹೊಸ ಆಡಳಿತ ವ್ಯವಸ್ಥೆಗೆ ಸರ್ಕಾರ ಚಾಲನೆ ನೀಡಿದೆ. ಈಗಿನಿಂದ ಬೆಂಗಳೂರು ನಗರವನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಲಾಗಿದೆ. ಅವು ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳು. ಹಾಲಿ ಬಿಬಿಎಂಪಿಯ ವಲಯಗಳನ್ನು ಆಧರಿಸಿ ಸ್ವಲ್ಪ ವಿಸ್ತರಣೆ ಮಾಡಿ ಈ ನಗರ ಪಾಲಿಕೆಗಳನ್ನು ರಚಿಸಲಾಗಿದೆ.
ಪ್ರತಿ ನಗರ ಪಾಲಿಕೆಗೆ ಒಬ್ಬರಂತೆ ಆಯುಕ್ತರ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಇವು ಕಾರ್ಯದರ್ಶಿ ಹುದ್ದೆ ಮಟ್ಟದ ಐಎಎಸ್ ಅಧಿಕಾರಿಗಳಿಗೆ ಮೀಸಲಾಗಿವೆ. ಇದಲ್ಲದೆ, ಪ್ರತಿ ನಗರ ಪಾಲಿಕೆಗೆ ಒಬ್ಬರಂತೆ ಹೆಚ್ಚುವರಿ ಆಯುಕ್ತರ ಹುದ್ದೆಗಳನ್ನು ಕೂಡ ನೀಡಲಾಗಿದೆ. ಒಟ್ಟು 10 ಐಎಎಸ್ ಅಧಿಕಾರಿಗಳು ಈ ಹೊಸ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದಲ್ಲದೆ, ನಗರ ಪಾಲಿಕೆಗಳ ಪ್ರತಿ ಎರಡು ವಲಯಗಳಿಗೆ ಹಿರಿಯ ಶ್ರೇಣಿಯ ಜಂಟಿ ಆಯುಕ್ತರ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಇವು ಕೆಎಎಸ್ ವೃಂದದ ಅಧಿಕಾರಿಗಳಿಂದ ನಿರ್ವಹಿಸಲಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಗೆ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಮೇಲ್ದರ್ಜೆಯ ಐಎಎಸ್ ಅಧಿಕಾರಿ ಮುಖ್ಯ ಆಯುಕ್ತರಾಗಿ ನೇಮಕಗೊಳ್ಳಲಿದ್ದಾರೆ. ಜಿಬಿಎಗೆ ಆಡಳಿತ, ಕಂದಾಯ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಮತ್ತು ಶಿಕ್ಷಣ, ಚುನಾವಣೆ, ವಿಪತ್ತು ನಿರ್ವಹಣೆ ಹಾಗೂ ಹಣಕಾಸು ಮುಂತಾದ ಪ್ರಮುಖ ವಿಭಾಗಗಳನ್ನು ನೋಡಿಕೊಳ್ಳಲು ನಾಲ್ಕು ವಿಶೇಷ ಆಯುಕ್ತರ ಹುದ್ದೆಗಳನ್ನೂ ಹಂಚಲಾಗಿದೆ.
ಸುರಕ್ಷತೆ ಹಾಗೂ ನಿಯಂತ್ರಣಕ್ಕಾಗಿ ಎರಡು ಐಪಿಎಸ್ ಹುದ್ದೆಗಳು ಕೂಡ ಒದಗಿಸಲಾಗಿದೆ. ಬಿಎಂಟಿಎಫ್ ವಿಭಾಗಕ್ಕೆ ಎಡಿಜಿಪಿ ಮತ್ತು ಎಸ್‌ಪಿ ಹುದ್ದೆಗಳನ್ನು ನೀಡಲಾಗಿದೆ. ಈ ಹೊಸ ಆಡಳಿತ ವ್ಯವಸ್ಥೆಯಿಂದ ನಗರ ಪಾಲಿಕೆಗಳ ಕಾರ್ಯ ನಿರ್ವಹಣೆ ಸುಗಮವಾಗುವ ನಿರೀಕ್ಷೆ ಸರ್ಕಾರಕ್ಕೆ ಇದೆ.