ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರು ತಮ್ಮ 'ಕೆಡಿ' ಸಿನಿಮಾ ಬಿಡುಗಡೆ ಸಿದ್ಧತೆಗಳ ನಡುವೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಅವರು 'ಲೈಫ್ ಟು ಡೇ' ಚಿತ್ರಕ್ಕಾಗಿ ಹಾಡಿರುವ ಗೀತೆಯ ಬಗ್ಗೆ ಮಾಹಿತಿ ನೀಡಿದರು. "ನಾನು ಹಾಡು ಹೇಳಬೇಕೆಂದು ಕೇಳಿದರು. ಬೇರೆಯವರಿಂದ ಹಾಡಿಸಲು ಹೇಳಿದ್ದೆ. ಆದರೆ ಸಾಹಿತ್ಯ ಚೆನ್ನಾಗಿದೆ" ಎಂದು ಪ್ರೇಮ್ ತಿಳಿಸಿದರು.
"ಜನರು ನನಗೆ ಹೆಚ್ಚು ಹಾಡು ಹೇಳಬೇಡಿ ಎನ್ನುತ್ತಾರೆ. ಹಾಗಾಗಿ ನಾನು ಆಯ್ದ ಹಾಡುಗಳನ್ನು ಮಾತ್ರ ಹಾಡುತ್ತೇನೆ. 'ನಿನೇ ಬೇಕಿತ್ತಾ' ಎಂಬ ಪ್ರೇಮಗೀತೆಯೊಂದನ್ನು ನಾನು ಜಾನಪದ ಶೈಲಿಯಲ್ಲಿ ಹಾಡಿದ್ದೇನೆ" ಎಂದು ಅವರು ವಿವರಿಸಿದರು.
ದರ್ಶನ್ ಅಭಿಮಾನಿಗಳ ಕುರಿತು ಪರೋಕ್ಷವಾಗಿ ಮಾತನಾಡಿದ ಪ್ರೇಮ್, "ಟ್ರೋಲ್ ಮಾಡುವವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಆ ಕೆಲಸ ಮಾಡುತ್ತಾರೆ. ಅವರಿಗೆ ನಾಲ್ಕು ಕಾಸು ಬರುತ್ತದೆ ಎಂದರೆ ನಾವು ಏಕೆ ವಿರೋಧಿಸಬೇಕು?" ಎಂದು ಪ್ರಶ್ನಿಸಿದರು. ಆದರೆ, ಯಾರೂ ಕೆಟ್ಟದಾಗಿ ಟ್ರೋಲ್ ಮಾಡಬಾರದು ಎಂದು ಒತ್ತಿ ಹೇಳಿದರು.
ವಿಶೇಷವಾಗಿ, ಮಹಿಳೆಯರನ್ನು ಕೆಟ್ಟದಾಗಿ ಟ್ರೋಲ್ ಮಾಡುವುದನ್ನು ಅವರು ತೀವ್ರವಾಗಿ ಖಂಡಿಸಿದರು. "ಪುರುಷರ ಬಗ್ಗೆ ಮಾತನಾಡಲಿ, ಅವರು ಹೇಗೋ ಹೊಂದಿಕೊಳ್ಳುತ್ತಾರೆ. ಆದರೆ, ಮಹಿಳೆಯರ ಬಗ್ಗೆ ಯಾರೂ ಕೆಟ್ಟದಾಗಿ ಟ್ರೋಲ್ ಮಾಡಬಾರದು" ಎಂದು ಪ್ರೇಮ್ ಸ್ಪಷ್ಟಪಡಿಸಿದರು.
ದರ್ಶನ್ ಅಭಿಮಾನಿಗಳು ದಿಲ್ ಖುಷ್...ಹೇಗಿದೆ ಗೊತ್ತಾ 'ಇದ್ರೆ ನೆಮ್ದಿಯಾಗ್ ಇರ್ಬೇಕು' ಸಾಂಗ್
ಇದೇ ಸಂದರ್ಭದಲ್ಲಿ, ಪ್ರೇಮ್ ತಮ್ಮ ಅಮ್ಮ ನಡೆಸುತ್ತಿರುವ ದೇಸಿ ತುಪ್ಪದ ವ್ಯಾಪಾರದ ಬಗ್ಗೆಯೂ ಮಾಹಿತಿ ನೀಡಿದರು. "ನಮ್ಮ ಅಮ್ಮನ ತೋಟದಲ್ಲಿ ರಾಸಾಯನಿಕರಹಿತ ತುಪ್ಪವನ್ನು ತಯಾರಿಸಲಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ" ಎಂದರು. ತಮ್ಮ ಅಮ್ಮನಿಗೆ ತಾಜಾ ತುಪ್ಪ ಸಿಗದೇ ಇದ್ದಾಗ ಈ ವ್ಯವಹಾರ ಶುರುಮಾಡಿದುದನ್ನು ಸ್ಮರಿಸಿದರು. "ನಾನು ಹಾಡಿದ ಹಣವನ್ನು ಇತರರಿಗೆ ನೀಡಲಾಗುವುದು" ಎಂದು ಅವರು ನುಡಿದರು.
ದರ್ಶನ್ ಕುರಿತು ಮಾತನಾಡಿದ ಪ್ರೇಮ್, ಟಿವಿಗಳಲ್ಲಿ ದರ್ಶನ್ ಬಂದಾಗ ಹೆಚ್ಚು ವೀಕ್ಷಿಸಲಾಗುತ್ತದೆ ಎಂದು ತಿಳಿಸಿದರು. "ದರ್ಶನ್ ಅವರ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ. ಕೆಲವು ಸ್ಯಾಡಿಸ್ಟ್‌ಗಳು ಅವರನ್ನು ನೋಡಿ ಬಯ್ಯುತ್ತಾರೆ. ದರ್ಶನ್ ಎಷ್ಟು ನೋವು ಪಟ್ಟಿದ್ದಾರೆಂದು ಅವರಿಗೆ ಗೊತ್ತಿರುತ್ತದೆ" ಎಂದು ಹೇಳಿದರು.