ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದಿಂದ ಅಮಾನತುಗೊಂಡಿದ್ದ ಕೆ. ಕವಿತಾ ಅವರು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಆರ್‌ಎಸ್ ಸಂಸ್ಥಾಪಕ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ, ಪಕ್ಷದಿಂದ ಏಕಾಏಕಿ ಅಮಾನತುಗೊಳಿಸಿದ ಕ್ರಮದಿಂದ ತೀವ್ರ ನೋವಾಗಿದೆ ಎಂದು ತಮ್ಮ ರಾಜೀನಾಮೆ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ.
ಪತ್ರಿಕಾ ಹೇಳಿಕೆಯ ಮೂಲಕ ರಾಜೀನಾಮೆ ವಿಷಯವನ್ನು ಬಹಿರಂಗಪಡಿಸಿದ ಕವಿತಾ, ಎಂಎಲ್‌ಸಿ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. "ನನ್ನ ರಾಜೀನಾಮೆ ಪತ್ರಗಳನ್ನು ಸಭಾಧ್ಯಕ್ಷರು ಮತ್ತು ಕೆ. ಚಂದ್ರಶೇಖರ್ ರಾವ್ ಅವರಿಗೆ ಕಳುಹಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಪಕ್ಷ ಸೇರುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಕವಿತಾ, ತೆಲಂಗಾಣ ಜಾಗೃತಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದ್ದಾರೆ.
ತಮ್ಮ ಕುಟುಂಬದ ನಡುವೆ ಬಿರುಕು ಮೂಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಕವಿತಾ, ಕೆಸಿಆರ್ ಮತ್ತು ಕೆಟಿಆರ್ ನನ್ನ ಕುಟುಂಬ. ನಾವು ರಕ್ತ ಸಂಬಂಧಿಗಳು. ಪಕ್ಷದಿಂದ ಅಮಾನತುಗೊಂಡ ಕಾರಣಕ್ಕೆ ಈ ಸಂಬಂಧ ಮುರಿಯುವುದಿಲ್ಲ. ಆದರೆ, ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ನಮ್ಮ ಕುಟುಂಬದ ಅವನತಿಯನ್ನು ಬಯಸುತ್ತಿದ್ದಾರೆ ಎಂದು ಹೇಳಿದರು. ತೆಲಂಗಾಣದ ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಬಿಆರ್‌ಎಸ್ ನಾಯಕ ಹರೀಶ್ ರಾವ್ ತಮ್ಮ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಕವಿತಾ ಆರೋಪಿಸಿದ್ದಾರೆ.
Fossil Men Leather Analog Black Dial Watch-Fs5251Set, Band Color-Brown
ತಮ್ಮ ಸುತ್ತ ಇರುವ ಪಕ್ಷದ ಮುಖಂಡರ ಬಗ್ಗೆ ಹುಷಾರಾಗಿರುವಂತೆ ಅಪ್ಪನಿಗೆ ಮನವಿ ಮಾಡುತ್ತೇನೆ. ನಾನು ನೇರವಾಗಿ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದೇನೆ. ನಮ್ಮ ಕುಟುಂಬವನ್ನು ನಾಶಪಡಿಸಲು ರೇವಂತ್ ರೆಡ್ಡಿ ಮತ್ತು ಹರೀಶ್ ರಾವ್ ವಿಮಾನದಲ್ಲಿ ಕುಳಿತು ಹುನ್ನಾರ ನಡೆಸಿದ್ದಾರೆ ಎಂದು ಕವಿತಾ ತಿಳಿಸಿದರು. ಕಾಳೇಶ್ವರಂ ಯೋಜನೆ ಆರಂಭವಾದಾಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದರು. ಆದರೆ, ಪ್ರಕರಣಗಳಲ್ಲಿ ಅವರ ಹೆಸರು ಕೇಳಿಬಂದಿಲ್ಲ. ನನ್ನ ಕುಟುಂಬ ಸದಸ್ಯರ ಮೇಲೆ ಮಾತ್ರ ಏಕೆ ಪ್ರಕರಣ ದಾಖಲಾಯಿತು? ಎಂದು ಕವಿತಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನನ್ನ ಲಕ್ಕಿ ನಂಬರ್ 3..ಹೀಗಾಗಿ ನನಗೆ ಮೂರು ಮಕ್ಕಳು ಬೇಕು ಎಂದ ನಟಿ! ಮದುವೆಗೂ ಮುಂಚೆ ಇದೆಂಥಾ ಆಸೆ ಜಾನ್ವಿ ಕಪೂರ್!