ಖ್ಯಾತ ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಹೆಣ್ಣುಮಗುವಿಗೆ ತಾಯಿಯಾಗಿದ್ದಾರೆ. ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಸದ್ಯ ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ. ಆದರೆ, ಅವಳಿ ಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು, ಮತ್ತೊಂದು ಆರೋಗ್ಯದಿಂದಿರುವುದು ತಿಳಿದುಬಂದಿದೆ. ವೈದ್ಯರ ಸೂಚನೆಯಂತೆ ಎಂಟು ತಿಂಗಳಿಗೆ ಹೆರಿಗೆ ಮಾಡಿಸಲಾಗಿದ್ದು, ಒಂದು ಮಗುವಿಗೆ ಏಳು ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡಿತ್ತು.
ಭಾವನಾ ರಾಮಣ್ಣ ಅವರು ಅವಿವಾಹಿತರಾಗಿ ಮಕ್ಕಳನ್ನು ಹೊಂದಲು ಧೈರ್ಯಶಾಲಿ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದರೂ, ಅವುಗಳಿಗೆ ಸೂಕ್ತ ಉತ್ತರ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿಯೇ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆದಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಭಾವನಾ, ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅವರು ತಮ್ಮ ಗರ್ಭಧಾರಣೆಯ ಕುರಿತು ಈ ಹಿಂದೆ ಪೋಸ್ಟ್ ಒಂದನ್ನು ಹಂಚಿಕೊಂಡು ಆಶ್ಚರ್ಯ ಮೂಡಿಸಿದ್ದರು.
ಅವರು ತಮ್ಮ ಪೋಸ್ಟ್‌ನಲ್ಲಿ, "ಹೊಸ ಅಧ್ಯಾಯ, ಹೊಸ ಲಯ. ನಾನು ಇದನ್ನು ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ಆದರೆ, ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ ಮತ್ತು ಕೃತಜ್ಞತೆಯಿಂದ ತುಂಬಿದ್ದೇನೆ" ಎಂದು ಬರೆದುಕೊಂಡಿದ್ದರು.
Titan Edge Quartz Analog White Dial Leather Strap Watch for Men-NS679YL01/NT679YL01
"ನನ್ನ 20 ಮತ್ತು 30ರ ದಶಕದಲ್ಲಿ ತಾಯ್ತನದ ಆಸೆ ಇರಲಿಲ್ಲ. ಆದರೆ, 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ ಈ ಹಾದಿ ಸುಲಭವಾಗಿರಲಿಲ್ಲ – ಹಲವು ಐವಿಎಫ್ ಕ್ಲಿನಿಕ್‌ಗಳು ನನ್ನನ್ನು ನಿರಾಕರಿಸಿದವು" ಎಂದು ಭಾವನಾ ವಿವರಿಸಿದ್ದಾರೆ.
"ನಂತರ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ರೈನ್‌ಬೋ ಆಸ್ಪತ್ರೆಯಲ್ಲಿ ಡಾ. ಸುಷ್ಮಾ ಅವರನ್ನು ಭೇಟಿಯಾದೆ. ಅವರ ಬೆಂಬಲದಿಂದ ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾದೆ. ನನ್ನ ತಂದೆ, ಸಹೋದರರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು. ಆದರೆ, ನನ್ನ ಹೃದಯದಲ್ಲಿ ನಾನು ಸಿದ್ಧಳಾಗಿದ್ದೇನೆಂದು ತಿಳಿದಿತ್ತು" ಎಂದು ಅವರು ಹೇಳಿದ್ದಾರೆ.
"ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ತಮ್ಮ ಬಗ್ಗೆ ಹೆಮ್ಮೆ ಮತ್ತು ಆತ್ಮವಿಶ್ವಾಸ ಬೆಳೆಸುವ ರೀತಿಯಲ್ಲಿ ಅವರನ್ನು ಪೋಷಿಸಲಾಗುತ್ತದೆ. ನಾನು ಬಂಡಾಯದ ಕಾರಣಕ್ಕೆ ಈ ದಾರಿ ಆಯ್ಕೆ ಮಾಡಿಕೊಂಡಿಲ್ಲ; ನನ್ನ ಸತ್ಯವನ್ನು ಗೌರವಿಸಲು ಇದನ್ನು ಆರಿಸಿಕೊಂಡೆ" ಎಂದು ಭಾವನಾ ಸ್ಪಷ್ಟಪಡಿಸಿದ್ದಾರೆ