ಶಿವಮೊಗ್ಗ (ಸೆ.9): ಈ ದೇಶದ ಅನ್ನ ತಿಂದು, ಗಾಳಿ ಉಸಿರಾಡಿ, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ಮನಸ್ಥಿತಿಯ ಮುಸ್ಲಿಮರಿಗೆ ಇಲ್ಲಿ ಬದುಕುವ ಹಕ್ಕೇ ಇಲ್ಲ, ಇದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಇವರ ಧೈರ್ಯವನ್ನುಎತ್ತಿ ತೋರಿಸುತ್ತದೆ. ಈ ಘೋಷಣೆ ಕೂಗಿದವರು ಕ್ಷಮೆ ಕೇಳಬೇಕು, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ರಾಷ್ಟ್ರದ್ರೋಹದ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಬೇಕು. ಈ ದೇಶದ್ರೋಹಿಗಳ ಹಿಂದಿನ ಶಕ್ತಿಯನ್ನು ಪೊಲೀಸರು ಪತ್ತೆಹಚ್ಚಬೇಕು. ಇಂತಹ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಭಾರತಾಂಬೆಗೆ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದಾಗ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಿತ್ತು. ಇಂತಹ ಘೋಷಣೆಗಳು ಕೇಳಿಬರುತ್ತಿರುವುದು ಈ ಸರ್ಕಾರ ಜೀವಂತವಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಂತಿದೆ. ಕಾಂಗ್ರೆಸ್ ಸರ್ಕಾರದ ರಾಜಕಾರಣದಿಂದಾಗಿ ಮುಸ್ಲಿಮರಲ್ಲಿ ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ಸಿಗುತ್ತಿದೆ. ಮುಸ್ಲಿಮರನ್ನು ತೃಪ್ತಿಪಡಿಸಿದರೆ ವೋಟು ಬರುತ್ತದೆ ಎಂಬ ಕಾಂಗ್ರೆಸ್‌ನ ನೀತಿಯಿಂದ ಈ ಸ್ಥಿತಿ ಉಂಟಾಗಿದೆ. ದೇಶದ ಭದ್ರತೆಯನ್ನು ಬಲಿಕೊಟ್ಟು, ದೇಶದ್ರೋಹಿಗಳ ವೋಟಿಗಾಗಿ ಎಷ್ಟು ದಿನ ಓಲೈಕೆ ಮಾಡುವಿರಿ? ಕಾಂಗ್ರೆಸ್ಗೆ ದೇಶಪ್ರೇಮ, ಅಭಿಮಾನ ಇದ್ದರೆ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರ ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ ಎಂಬ ಭಾವನೆ ಕೆಲವು ಮತಾಂಧ ಮುಸ್ಲಿಮರಲ್ಲಿ ಮೂಡಿದೆ. ಇದರಿಂದ ಕಾನೂನು ಭಯವಿಲ್ಲದೇ ಪಾಕಿಸ್ತಾನ್ ಪರ ಘೋಷಣೆ ಕೂಗುವುದು, ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸುವಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕಾಂಗ್ರೆಸ್‌ನ ಓಲೈಕೆ ರಾಜಕಾರಣವನ್ನು ತೀವ್ರವಾಗಿ ಖಂಡಿಸಿದರು. ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನ್ ಪರ ಘೋಷಣೆ ಕೂಗುವುದು ಒಪ್ಪಿಗೆಯಲ್ಲ. ಪಹಲ್ಗಾಂ ದಾಳಿಯ ಸಂದರ್ಭದಲ್ಲಿ ಇಡೀ ದೇಶ ಒಗ್ಗಟ್ಟಾಗಿತ್ತು, ಮುಸ್ಲಿಮರು ಸಹ ನರೇಂದ್ರ ಮೋದಿ ಮತ್ತು ಭಾರತದ ಪರ ನಿಂತಿದ್ದರು.