ಬೆಂಗಳೂರು - ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ಸೇರಿದಂತೆ ರಾಜ್ಯದ ಹಲವೆಡೆ ಈ ರೀತಿ ಘಟನೆಗಳು ಭಾರೀ ಈಗ ಸುದ್ದಿಯಲ್ಲಿದೆ. ಇದರ ಮಧ್ಯೆ ದಸರಾ ಉದ್ಟಾಟನೆ ಮಹೋತ್ಸವದ ಅತಿಥಿಯಾಗಿ ಲೇಖಕಿ ಬಾನು ಮುಷ್ತಾಕ್ ಅವರನ್ನ ಆಹ್ವಾನ ಮಾಡಿರುವುದನ್ನ ಆಕ್ಷೇಪ ಎತ್ತಿರುವ ವಿಚಾರವೂ ಮತ್ತೊಂದೆಡೆ ಚರ್ಚೆಗೆ ಗ್ರಾಸವಾಗಿದೆ. ಹೌದು , ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರನ್ನ ದಸರಾ ಉದ್ಟಾಟನೆಗೆ ಸರ್ಕಾರ ಆಹ್ವಾನ ಮಾಡಿದೆ. ಆದರೆ, ಈ ನಡೆ ಸರಿ ಅಲ್ಲ. ದಸರಾ ಧಾರ್ಮಿಕ ಆಚರಣೆ , ನಾಡ ದೇವತೆ ಉತ್ಸವಕ್ಕೆ ನಂಬಿಕೆ ಇಲ್ಲದವರನ್ನ ಕರೆದಿರುವುದನ್ನ ರದ್ದು ಮಾಡುವಂತೆ ಹಲವರು ಟೀಕಿಸಿದರು.
ಈ ಮೂಲಕ ಸರ್ಕಾರಕ್ಕೆ ಒತ್ತಡ ಹೇರುವ ತಂತ್ರ ಪಾಲಿಸಿದರು. ಆದರೆ, ಸರ್ಕಾರ ಮಾತ್ರ ತನ್ನ ನಿಲುವನ್ನ ಬದಲಿಸಿದೇ ಅಧಿಕೃತ ಆಹ್ವಾನದ ಹೆಜ್ಜೆಯನ್ನ ಇಟ್ಟಿತು. ಈ ನಡೆಯನ್ನ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಈಗ ಮತ್ತೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನ ಸಲ್ಲಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ಸಮುದಾಯಕ್ಕೆ ಸಮಸ್ಯೆ ಉಂಟು ಮಾಡುವ ಘಟನೆಗಳನ್ನ ಮಾತ್ರ ಪಿಐಎಲ್ ಹಾಕಿ ಪ್ರಶ್ನಿಸಲು ಅವಕಾಶ ಇದೆ. ಹಿಂದೂ ಅಲ್ಲದ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ವಾಪಸ್ ಪಡೆಯಲು ಸರಕಾರಕ್ಕೆ ನಿರ್ದೇಶನ ನೀಡಬೇಕು.
ಅದೇ ರೀತಿ ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವೆಂದು ಘೋಷಿಸಿ ಅದನ್ನು ಹಿಂದೂ ಗಣ್ಯರಿಂದ ಉದ್ಘಾಟಿಸಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಹಿಂದೂ ಆಗಮಿಕ ಪದ್ಧತಿ ಪ್ರಕಾರವೇ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನೆರವೇರಿಸಲು ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ನಿವಾಸಿ ಎಚ್.ಎಸ್.ಗೌರವ್ ಮನವಿ ಮಾಡಿದ್ದಾರೆ. ಇವರೊಂದಿಗೆ ಬೆಂಗಳೂರಿನ ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್.ಸೌಮ್ಯ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳು ವಿಚಾರಣೆಗೆ ಬರಬೇಕಿದೆ.