ಖ್ಯಾತ ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪವನ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣ ದಾಖಲಾಗಿದೆ. ಪವನ್ ಅವರ ಪತ್ನಿ ಪವಿತ್ರಾ ಅವರು ಪತಿ ಪವನ್, ಮಾವ ಎಸ್. ನಾರಾಯಣ್ ಮತ್ತು ಅತ್ತೆ ಭಾಗ್ಯವತಿ ವಿರುದ್ಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪವನ್ ಮತ್ತು ಪವಿತ್ರಾ ಅವರ ವಿವಾಹ 2021ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿ ನಡೆದಿತ್ತು. ಪವಿತ್ರಾ ಸಿನಿಮಾವೊಂದರ ಆಡಿಷನ್‌ನಲ್ಲಿ ಭಾಗವಹಿಸಿದ್ದಾಗ ಪವನ್ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಆದರೆ ಮದುವೆಯಾದ ಮೂರೇ ತಿಂಗಳಲ್ಲಿ ನಾರಾಯಣ್ ಕುಟುಂಬದಲ್ಲಿ ಕಲಹ ಪ್ರಾರಂಭವಾಯಿತು.
ಕುಟುಂಬದಲ್ಲಿನ ಜಗಳಕ್ಕೆ ಪವಿತ್ರಾ ಕಾರಣವೆಂದು ನಿಂದಿಸಲಾಗಿದ್ದು, 2022ರಲ್ಲಿ ಪವಿತ್ರಾ ಮತ್ತು ಪವನ್ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಪವನ್ ಕೆಲಸವಿಲ್ಲದೆ ಕಷ್ಟಪಡುತ್ತಿದ್ದರು. ಕ್ಯಾಬ್ ಓಡಿಸಲು ಪತ್ನಿ ಪವಿತ್ರಾ ಅವರಿಂದ ಹಣ ಪಡೆದು ಕಾರು ಖರೀದಿಸಿದ್ದ ಪವನ್, ನಂತರ ಇಎಂಐ ಕಟ್ಟುವ ಹಣವನ್ನೂ ಪತ್ನಿಯಿಂದಲೇ ಭರಿಸಿದ್ದಾರೆಂದು ಆರೋಪಿಸಲಾಗಿದೆ.
'ದೀಪ ಕತ್ತಲೆಯನ್ನು ಹೋಗಲಾಡಿಸುತ್ತೆ'....ನಟ ಪವನ್ ಕಲ್ಯಾಣ್ ಅವರಿಗೆ ಸ್ವಾಗತ ಎಂದು ಡಾ. ವೀರೇಂದ್ರ ಹೆಗ್ಗಡೆ!
ಪವನ್ ನಂತರ ತಮ್ಮ ತಂದೆಯ ಹೆಸರಿನಲ್ಲಿ 'ಕಲಾ ಸಾಮ್ರಾಟ್' ಎಂಬ ನಟನಾ ತರಬೇತಿ ಶಾಲೆಯನ್ನು ಪ್ರಾರಂಭಿಸಿದರು. ಈ ವೇಳೆ ಪತ್ನಿ ಪವಿತ್ರಾ ಅವರಿಂದ 10 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಪವಿತ್ರಾ ತಮ್ಮ ಕೆಲಸದ ಸ್ಥಳದಲ್ಲಿ ಸಾಲ ಪಡೆದು, ತಾಯಿಯ ಚಿನ್ನಾಭರಣಗಳನ್ನು ಅಡಮಾನವಿಟ್ಟು ಈ ಹಣವನ್ನು ಪತಿಗೆ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಕಡೆಗೆ ಪತಿ ಪವನ್, ಮಾವ ಮತ್ತು ಅತ್ತೆ ಸೇರಿ ಪವಿತ್ರಾ ಅವರನ್ನು ಆರ್.ಆರ್. ನಗರದ ನಿವಾಸದಿಂದ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಒಂದು ವರ್ಷದಿಂದ ಪವಿತ್ರಾ ಪವನ್‌ನಿಂದ ದೂರವಾಗಿ ತಮ್ಮ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಪವಿತ್ರಾ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.