ಬೆಂಗಳೂರು: ರಾಜ್ಯ ಸರ್ಕಾರವು ಮತ್ತೊಮ್ಮೆ ಜಾತಿ ಗಣತಿ ನಡೆಸಲು ನಿರ್ಧರಿಸಿದೆ. ಈ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರ ನೀಡಿದರು. 1.75 ಲಕ್ಷ ಶಿಕ್ಷಕರನ್ನು ಬಳಸಿಕೊಂಡು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಹೊಸ ಜಾತಿ ಗಣತಿ ನಡೆಯಲಿದೆ ಎಂದು ಅವರು ಹೇಳಿದರು.
ಡಿಸೆಂಬರ್ ಒಳಗೆ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 1.75 ಲಕ್ಷ ಶಿಕ್ಷಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ಸಮೀಕ್ಷೆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ, 8050770004 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಲ್ಲದೆ, www.ksdckarnatakagovt.in ವೆಬ್‌ಸೈಟ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಿಎಂ ಮಾಹಿತಿ ನೀಡಿದರು.
ಕಾಂತರಾಜು ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ. ನಂತರ ಜಯಪ್ರಕಾಶ್ ಹೆಗಡೆ ಅವರು ಹಿಂದುಳಿದ ಆಯೋಗದ ಅಧ್ಯಕ್ಷರಾದರು. 2015 ರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆದಿತ್ತು. ಹತ್ತು ವರ್ಷಗಳ ನಂತರ ಹೊಸ ಸಮೀಕ್ಷೆಗೆ ನಿರ್ಧರಿಸಲಾಗಿದೆ. ಸಮೀಕ್ಷೆಯ ಜವಾಬ್ದಾರಿಯನ್ನು ಹಿಂದುಳಿದ ಆಯೋಗಕ್ಕೆ ವಹಿಸಲಾಗಿದೆ.
ಜಾತಿ, ಧರ್ಮ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾದಾಗ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯಕವಾಗುತ್ತದೆ. ಹಿಂದೆ ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಹಳೆಯದು ಎಂದು ಪರಿಗಣಿಸಲಾಗಿಲ್ಲ. ಈಗ ಹೊಸದಾಗಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.