ಜಲಾಲಾಬಾದ್: 2021ರಲ್ಲಿ ಅಫ್ಘಾನಿಸ್ತಾನದ ಆಡಳಿತವನ್ನು ವಹಿಸಿಕೊಂಡ ತಾಲಿಬಾನ್ ಸರ್ಕಾರವು ವಿವಿಧ ನಿರ್ಬಂಧ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ಇದೀಗ ದೇಶಾದ್ಯಂತ ವೈಫೈ ಇಂಟರ್ನೆಟ್‌ಗೆ ನಿಷೇಧ ಹೇರಿದೆ. ಬಾಲ್ಖ್ ಪ್ರಾಂತ್ಯದಲ್ಲಿ ಅನೈತಿಕತೆಯನ್ನು ತಡೆಗಟ್ಟುವ ಸಲುವಾಗಿ ಈ ನಿಷೇಧವನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈಫೈಗೆ ಬದಲಾಗಿ ದೇಶೀಯವಾಗಿ ಪರ್ಯಾಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿದ್ದಾರೆ. ಇದರಿಂದ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಸ್ಥಳಗಳಲ್ಲಿ ವೈಫೈ ಸೇವೆಯನ್ನು ರದ್ದುಗೊಳಿಸಲಾಗಿದೆ. ಆದರೆ, ಮೊಬೈಲ್ ಇಂಟರ್ನೆಟ್ ಸೇವೆಯು ಯಥಾಪ್ರಕಾರ ಕಾರ್ಯನಿರ್ವಹಿಸಲಿದೆ.
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಂಗಳವಾರ ಆರನೇ ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಉಭಯ ದೇಶಗಳು ವ್ಯಕ್ತಪಡಿಸಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಆಮದುಗಳ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿರುವ ಬೆನ್ನಲ್ಲೇ, ಈ ವಿಷಯವನ್ನು ಚರ್ಚಿಸಲು ಅಮೆರಿಕಾದ ಸಂಧಾನಕಾರ ಬ್ರೆಂಡನ್ ಲಿಂಚ್ ತಂಡವು ಭಾರತಕ್ಕೆ ಆಗಮಿಸಿ, ರಾಜೇಶ್ ಅಗರ್ವಾಲ್ ಜೊತೆ ಸಭೆ ನಡೆಸಿತು. ಈ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ವಿವರಗಳು ಲಭ್ಯವಾಗಿಲ್ಲವಾದರೂ, ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಎರಡೂ ದೇಶಗಳು ತಿಳಿಸಿವೆ.
ಬಿಹಾರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಚುನಾವಣಾ ಆಯೋಗದ ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ಪಶ್ಚಿಮ ಬಂಗಾಳದಲ್ಲಿಯೂ ಜಾರಿಗೊಳಿಸಲು ಆಯೋಗ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಮಂಗಳವಾರದಿಂದ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾ ಉಪ ವಿಭಾಗದ ಅಧಿಕಾರಿಗಳು ಮತ್ತು ಚುನಾವಣಾ ನೋಂದಣಾಧಿಕಾರಿಗಳಿಗೆ ತರಬೇತಿ ಶುರುವಾಗಲಿದೆ. ಈ ತರಬೇತಿ ಪೂರ್ಣಗೊಂಡ ಬಳಿಕ, ಈ ಅಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಿದ್ದಾರೆ. ಬೂತ್ ಅಧಿಕಾರಿಗಳು ಜನರಿಗೆ ಈ ಕಾರ್ಯಕ್ರಮದ ಕುರಿತು ವಿವರಣೆ ನೀಡಲಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.