ಕೊಪ್ಪಳ: ಜಿಲ್ಲಾ ಆಡಳಿತ ಭವನದಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ, ದೂರು ನೀಡಲು ಬಂದ ಯುವಕನಿಗೆ ಉಪಲೋಕಾಯುಕ್ತ ವೀರಪ್ಪ ಅವರು ಗದರಿಕೆ ಹಾಗೂ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ಯುವಕ ಮಂಜುನಾಥ್ ಅವರು, “ಒಬ್ಬರು ಸುಳ್ಳು ಅಂಗವಿಕಲ ಪ್ರಮಾಣಪತ್ರ ಪಡೆದು ಸರ್ಕಾರಿ ನೌಕರಿ ಮಾಡುತ್ತಿದ್ದಾರೆ” ಎಂಬ ವಿಷಯ ಕುರಿತು ಅಧಿಕೃತ ದೂರು ನೀಡಲು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ದೂರು ಸ್ವೀಕರಿಸುವ ಬದಲಿಗೆ, ಉಪಲೋಕಾಯುಕ್ತರು ಪ್ರತಿಕ್ರಿಯೆ ನೀಡಿದ ರೀತಿ ಆಕರ್ಷಕವಾಗಿರಲಿಲ್ಲ.
“ಸುಳ್ಳು ದೂರು ಕೊಟ್ಟರೆ, ನೇರವಾಗಿ ಮೂರು ತಿಂಗಳು ಜೈಲಿಗೆ ಹಾಕಿಸುತ್ತೇನೆ!”
ಎಂದು ಉಪಲೋಕಾಯುಕ್ತ ವೀರಪ್ಪ ಅವರು ಎಚ್ಚರಿಕೆ ನೀಡಿರುವುದು ತಿಳಿದುಬಂದಿದೆ.
ಇನ್ನಷ್ಟು ಗರಂ ಆಗಿ, “ಅವರು ಸುಳ್ಳು ದಾಖಲೆ ಸಲ್ಲಿಸಿ ನೌಕರಿ ಪಡೆದಿದ್ದರೆ ಕೋರ್ಟ್‌ಗೆ ಹೋಗಿ… ನಿಮಗೇಕೆ ಹೊಟ್ಟೆಕಿಚ್ಚು? ನೀನು ಏನು ಮಾಡ್ತೀಯಾ?” ಎಂದು ಪ್ರಶ್ನಿಸಿದರಂತೆ. ಈ ಮಾತುಗಳಿಂದ ಬೆಚ್ಚಿಬಿದ್ದ ಮಂಜುನಾಥ್ ಅವರು ಕೊನೆಗೆ, ಯಾವುದೇ ಕ್ರಮ ಕೈಗೊಳ್ಳದಿರಲು ಒಪ್ಪಿಕೊಂಡು ತಪ್ಪೋಪ್ಪಿಗೆ ಪತ್ರ ಬರೆದು ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಘಟನೆಯ ವಿಡಿಯೋ/ಮಾಹಿತಿ ವೈರಲ್ ಆಗುತ್ತಿದ್ದಂತೆ, ಆಡಳಿತ ವ್ಯವಸ್ಥೆಯ ನಡೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಜನರ ಹಕ್ಕನ್ನು ಗೌರವಿಸಬೇಕಾದ ಅಧಿಕಾರಿಗಳು, ದೂರು ಸ್ವೀಕರಿಸುವ ಬದಲಿಗೆ ಬೆದರಿಕೆ ಹಾಕುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ.
ಉಪಲೋಕಾಯುಕ್ತ ಕಚೇರಿಯಿಂದ ಈ ಕುರಿತು ಅಧಿಕೃತ ಸ್ಪಷ್ಟೀಕರಣ ಇನ್ನೂ ಬಂದಿಲ್ಲ. ಆದರೆ ಸ್ಥಳೀಯರು ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ಆಗ್ರಹಿಸುತ್ತಿದ್ದಾರೆ.