2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಗಲಭೆಗಳು ಆಕಸ್ಮಿಕ ಘಟನೆಯಲ್ಲ. ಬದಲಾಗಿ, ದೇಶದ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ರೂಪಿಸಲಾದ ಪೂರ್ವಯೋಜಿತ ಷಡ್ಯಂತ್ರ ಎಂದು ದೆಹಲಿ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಈ ಘಟನೆಯ ಹಿಂದಿನ ಶಕ್ತಿಗಳು ದೇಶಾದ್ಯಂತ ಇದೇ ಮಾದರಿಯ ಗಲಭೆ ಸೃಷ್ಟಿಸಿ ಅಸ್ಥಿರತೆ ತರುವ ಉದ್ದೇಶ ಹೊಂದಿದ್ದವು. ಸಿಎಎ ಕಾಯ್ದೆಯನ್ನು ಮುಸ್ಲಿಮರ ಮೇಲಿನ ದಾಳಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
53 ಜನರ ಸಾವಿಗೆ ಕಾರಣವಾದ ದಂಗೆ ಪ್ರಕರಣದಲ್ಲಿ ಬಂಧಿತರಾದ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಮತ್ತು ಇತರರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿರೋಧಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಆರೋಪಿಗಳು ಜೈಲಿನಲ್ಲಿಯೇ ಇರಬೇಕು, ಜಾಮೀನು ಪಡೆಯಲು ಅರ್ಹರಲ್ಲ ಎಂದು ಪೊಲೀಸರು ವಾದಿಸಿದ್ದಾರೆ.
ಸಿಎಎ ವಿರುದ್ಧದ ಅಸಮ್ಮತಿಯನ್ನು ದುರ್ಬಳಕೆ ಮಾಡಿಕೊಂಡು ದೇಶದ ಸಾರ್ವಭೌಮತೆ ಮತ್ತು ಅಖಂಡತೆಯ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ ಆರೋಪಿಗಳ ವಿರುದ್ಧ ಸಾಕಷ್ಟು ದಾಖಲೆಗಳು ಮತ್ತು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಆರೋಪಿಗಳು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು. ವಿದೇಶಿ ಮಾಧ್ಯಮಗಳ ಗಮನ ಸೆಳೆದು ಸಿಎಎ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಅವರ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದು ಯೋಜಿತ ದಂಗೆಯಾಗಿದ್ದು, ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದಲ್ಲೂ ಇದೇ ಮಾದರಿಯ ಗಲಭೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಉಮರ್ ಖಾಲಿದ್ ಚಕ್ಕಾ ಜಾಮ್ (ರಸ್ತೆ ತಡೆ) ಕಾರ್ಯಸೂಚಿಯ ಪ್ರಮುಖ ರೂವಾರಿಯಾಗಿದ್ದ. ದೆಹಲಿ ಪ್ರತಿಭಟನೆ ಬೆಂಬಲ ಗುಂಪು (ಡಿಪಿಎಸ್‌ಜಿ) ಅನ್ನು ಈ ಷಡ್ಯಂತ್ರವನ್ನು ಕಾರ್ಯಗತಗೊಳಿಸಲು ರೂಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಚಾಟ್ ದಾಖಲೆಗಳು ಸಾಕ್ಷಿಯಾಗಿವೆ.