Skip to main content
ವಿಡಿಯೋ
1/3
crime

ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಮಾನಹಾನಿ ಆರೋಪ: ಖಾಸಗಿ ಫೋಟೋ, ವಿಡಿಯೋ ಹಂಚಿಕೆ; ತಿಲಕನಗರ ಪೊಲೀಸರಿಂದ ವಿಚಾರಣೆ

By Bhavana Gowda
ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಮಾನಹಾನಿ ಆರೋಪ: ಖಾಸಗಿ ಫೋಟೋ, ವಿಡಿಯೋ ಹಂಚಿಕೆ; ತಿಲಕನಗರ ಪೊಲೀಸರಿಂದ ವಿಚಾರಣೆ

ಪಾರ್ವತಿ ಅವರ ಮಾನಹಾನಿ ಮಾಡುವ ಉದ್ದೇಶದಿಂದಲೇ ನಟಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರು: ಖಾಸಗಿ ಫೋಟೋಗಳು ಮತ್ತು ಆಡಿಯೋ-ವಿಡಿಯೋಗಳನ್ನು ಹಂಚುವ ಮೂಲಕ ಸ್ನೇಹಿತೆಯೊಬ್ಬರ ಮಾನಹಾನಿ ಮಾಡಿದ ಗಂಭೀರ ಆರೋಪದ ಮೇಲೆ ಕಿರುತೆರೆ ನಟಿ ಆಶಾ ಜೋಯಿಸ್ ಅವರನ್ನು ತಿಲಕನಗರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿರೀಕ್ಷಣಾ ಜಾಮೀನು ಪಡೆದು ವಿಚಾರಣೆಗೆ ಹಾಜರು

ನಟಿಯ ವಿರುದ್ಧ ಮಾನಹಾನಿ ಮತ್ತು ಖಾಸಗಿ ಮಾಹಿತಿ ಹಂಚಿಕೆಯ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈ ಹಿಂದೆ ನೋಟಿಸ್ ನೀಡಿದ್ದರು ಮತ್ತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪೊಲೀಸರ ಸೂಚನೆಯ ಮೇರೆಗೆ ನಟಿ ಆಶಾ ಜೋಯಿಸ್ ಅವರು ನಿನ್ನೆ (ನಿರೀಕ್ಷಣಾ) ಜಾಮೀನು ಪಡೆದು ತಿಲಕನಗರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿತೆ ನಟಿ ಆಶಾ ಜೋಯಿಸ್ ಅವರ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ತನಿಖೆ ಮುಂದುವರೆಸಿದ್ದಾರೆ.

ಮೊಬೈಲ್ ಕದ್ದು ಮಾಹಿತಿ ಹಂಚಿಕೆ ಆರೋಪ

ಆಶಾ ಜೋಯಿಸ್ ಅವರ ವಿರುದ್ಧ ಅವರ ಸ್ನೇಹಿತೆ, 61 ವರ್ಷದ ಪಾರ್ವತಿ ಎಂಬುವವರು ದೂರು ನೀಡಿದ್ದಾರೆ. ನಟಿ ಆಶಾ ಜೋಯಿಸ್ ಅವರು ತಮ್ಮ ಸ್ನೇಹಿತೆ ಪಾರ್ವತಿ ಅವರ ಫೋನ್ ಕದ್ದು, ಅದರಿಂದ ಖಾಸಗಿ ಫೋಟೋಗಳು ಮತ್ತು ಆಡಿಯೋ-ವಿಡಿಯೋಗಳನ್ನು ಪಡೆದುಕೊಂಡಿದ್ದಾರೆ. ಈ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ದುಬೈ ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಕಡೆಗಳಲ್ಲಿರುವ ಪಾರ್ವತಿ ಅವರ ಸ್ನೇಹಿತರು ಮತ್ತು ಪರಿಚಯಸ್ಥರಿಗೆ ಈ ಫೋಟೋ ಮತ್ತು ಆಡಿಯೋಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ಪಾರ್ವತಿ ಅವರ ಮಾನಹಾನಿ ಮಾಡುವ ಉದ್ದೇಶದಿಂದಲೇ ನಟಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತನಿಖೆಯಲ್ಲಿ ಹೊರಬಂದ ಮಾಹಿತಿ

ತಿಲಕನಗರ ಪೊಲೀಸರು ಪ್ರಕರಣದ ತನಿಖೆ ನಡೆಸುವಾಗ ಒಂದು ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ, ದೂರುದಾರರಾದ 61 ವರ್ಷದ ಪಾರ್ವತಿ ಅವರಿಗೆ ಇದುವರೆಗೂ ಮದುವೆ ಆಗಿಲ್ಲ ಎಂಬ ಅಂಶವು ತನಿಖೆಯ ವೇಳೆ ಖಚಿತವಾಗಿದೆ. ಸದ್ಯ ವಶಕ್ಕೆ ಪಡೆದಿರುವ ಆಶಾ ಜೋಯಿಸ್ ಅವರ ಮೊಬೈಲ್ ಫೋನ್‌ನಲ್ಲಿರುವ ಕರೆ ವಿವರಗಳು, ಮೆಸೇಜ್‌ಗಳು ಮತ್ತು ಕಳುಹಿಸಲಾದ ವಿಡಿಯೋಗಳ ಕುರಿತು ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ತನಿಖಾ ಗಮನ

ತಿಲಕನಗರ ಪೊಲೀಸರು ಕೆಲವು ಪ್ರಮುಖ ಅಂಶಗಳ ಮೇಲೆ ತಮ್ಮ ತನಿಖೆಯನ್ನು ಕೇಂದ್ರೀಕರಿಸಿದ್ದಾರೆ, ಯಾರಿಗೆಲ್ಲಾ ಖಾಸಗಿ ಮೆಸೇಜ್‌ಗಳನ್ನು ಕಳುಹಿಸಿ ಬ್ಲಾಕ್‌ಮೇಲ್ ಮಾಡಲು ಯತ್ನಿಸಲಾಗಿದೆ ಹಾಗೂ ಫೋಟೋ ಮತ್ತು ಆಡಿಯೋ ಹಂಚಿಕೆಯ ಹಿಂದಿನ ನಿಜವಾದ ಉದ್ದೇಶ ಏನು ಎಂದು. ತಿಲಕನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧದ ಪ್ರಕರಣದ ತನಿಖೆ ಮುಂದುವರಿದಿದೆ.