ಶಾಂಘೈ: ಅರುಣಾಚಲ ಪ್ರದೇಶ ಮೂಲದ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ನಲ್ಲಿ ನೆಲೆಸಿರುವ ಮಹಿಳೆಯೊಬ್ಬರಿಗೆ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರೀ ಕಿರುಕುಳ ಎದುರಾಗಿದೆ. ತಮ್ಮ ಬಳಿಯಿರುವ ಭಾರತೀಯ ಪಾಸ್‌ಪೋರ್ಟ್‌ನ ಕಾರಣಕ್ಕೆ ಅವರನ್ನು 18 ಗಂಟೆಗಳ ಕಾಲ ಬಂಧಿಸಿ, 'ಅರುಣಾಚಲ ಪ್ರದೇಶವು ಚೀನಾದ ಭಾಗವಾಗಿದೆ, ನಿಮ್ಮ ಪಾಸ್‌ಪೋರ್ಟ್ ಅಸಿಂಧು' ಎಂದು ಚೀನೀ ವಲಸೆ ಅಧಿಕಾರಿಗಳು ವಾದಿಸಿದ್ದಾರೆ.
ಪ್ರೇಮಾ ವಾಂಗ್ಜೋಮ್ ಥಾಂಗ್ಡಾಕ್ (Prema Wangjom Thongdok) ಎಂಬ ಯುಕೆ ನಿವಾಸಿ ಜಪಾನ್‌ಗೆ ತೆರಳುವಾಗ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಲಸೆ ಕೌಂಟರ್‌ನಲ್ಲಿ ಅಧಿಕಾರಿಗಳು ಅವರನ್ನು ಪ್ರತ್ಯೇಕಿಸಿ, ಅವರ ಭಾರತೀಯ ಪಾಸ್‌ಪೋರ್ಟ್‌ನ ಸಿಂಧುತ್ವವನ್ನು ಪ್ರಶ್ನಿಸಿದರು.
'ನಿಮ್ಮ ಪಾಸ್‌ಪೋರ್ಟ್ ಅಸಿಂಧು, ಚೀನೀ ಪೌರತ್ವಕ್ಕೆ ಅರ್ಜಿ ಹಾಕಿ'
ಅಧಿಕಾರಿಯೊಬ್ಬರು ಅನುವಾದಕ ಸಾಧನವನ್ನು ಬಳಸಿಕೊಂಡು, "ಅರುಣಾಚಲ ಪ್ರದೇಶವು ಚೀನಾದ ಭಾಗವಾಗಿದೆ. ನಿಮ್ಮ ಪಾಸ್‌ಪೋರ್ಟ್ ಮೂಲಭೂತವಾಗಿ ಅಸಿಂಧುವಾಗಿದೆ," ಎಂದು ಹೇಳಿರುವುದಾಗಿ ಪ್ರೇಮಾ ಆರೋಪಿಸಿದ್ದಾರೆ. ಅಲ್ಲದೆ, ಅವರನ್ನು ಗಂಟೆಗಳ ಕಾಲ ತಡೆಹಿಡಿಯಲಾಯಿತು ಮತ್ತು ಅಂತಿಮವಾಗಿ ಚೀನೀ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಲಾಯಿತು ಎನ್ನಲಾಗಿದೆ.
ಈ 18 ಗಂಟೆಗಳ ಅವಧಿಯಲ್ಲಿ ಅಧಿಕಾರಿಗಳು ಪ್ರೇಮಾ ಅವರಿಗೆ ಗೇಲಿ ಮಾಡುವುದು ಮತ್ತು ಮಾನಸಿಕ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾರೆ. ಅವರ ಜಪಾನ್‌ಗಿನ ಮುಂದಿನ ಪ್ರಯಾಣವನ್ನೂ ತಡೆಯಲಾಗಿತ್ತು.
ಈ ಘಟನೆಯು ಸುದ್ದಿ ಸಂಸ್ಥೆಗಳಲ್ಲಿ ವರದಿಯಾಗುತ್ತಿದ್ದಂತೆ, ವಿಷಯವನ್ನು ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತರಲಾಯಿತು. ಭಾರತೀಯ ರಾಯಭಾರ ಕಚೇರಿಯ ಮಧ್ಯಪ್ರವೇಶದ ನಂತರ ಪ್ರೇಮಾ ವಾಂಗ್ಜೋಮ್ ಥಾಂಗ್ಡಾಕ್ ಅವರನ್ನು ವಿಮಾನ ನಿಲ್ದಾಣದಿಂದ ರಕ್ಷಿಸಲಾಯಿತು. ಅರುಣಾಚಲ ಪ್ರದೇಶವನ್ನು ಚೀನಾ ತನ್ನ ಪ್ರದೇಶವೆಂದು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಚೀನಾ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.