Skip to main content
ವಿಡಿಯೋ
1/3
crime

ಆಂಧ್ರದ ಟೆಕ್ಕಿ, ಆಕೆಯ ಮಗನ ಹತ್ಯೆ ಪ್ರಕರಣ: ಭಾರತೀಯ ಪ್ರಜೆ ನಝೀರ್ ಹಮೀದ್‌ ಗಡಿಪಾರಿಗೆ ಯುಎಸ್ ಕೋರ್ಟ್ ಆಗ್ರಹ

By Bhavana Gowda
ಆಂಧ್ರದ ಟೆಕ್ಕಿ, ಆಕೆಯ ಮಗನ ಹತ್ಯೆ ಪ್ರಕರಣ: ಭಾರತೀಯ ಪ್ರಜೆ ನಝೀರ್ ಹಮೀದ್‌ ಗಡಿಪಾರಿಗೆ ಯುಎಸ್ ಕೋರ್ಟ್ ಆಗ್ರಹ

ವಿಜಯವಾಡ ಮೂಲದ 38 ವರ್ಷದ ಶಶಿಕಲಾ ನಾರಾ ಮತ್ತು ಅವರ ಆರು ವರ್ಷದ ಮಗ ಅನೀಶ್ ನಾರಾ ಅವರನ್ನು 2017ರಲ್ಲಿ ನ್ಯೂಜೆರ್ಸಿಯ ಅವರ ಅಪಾರ್ಟ್‌ಮೆಂಟ್‌ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ನ್ಯೂಜೆರ್ಸಿ/ಚೆನ್ನೈ: ಎಂಟು ವರ್ಷಗಳ ಹಿಂದೆ ಅಮೆರಿಕದ ನ್ಯೂಜೆರ್ಸಿಯಲ್ಲಿ ಆಂಧ್ರ ಪ್ರದೇಶ ಮೂಲದ ಟೆಕ್ಕಿ ಮತ್ತು ಆಕೆಯ ಆರು ವರ್ಷದ ಮಗನ ದ್ವಿಗುಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುಎಸ್ ಅಧಿಕಾರಿಗಳು ಕೊಲೆಗಳನ್ನು ಮಾಡಿದ ಭಾರತೀಯ ಪ್ರಜೆಯ ವಿರುದ್ಧ ಆರೋಪಗಳನ್ನು ದಾಖಲಿಸಿದ್ದಾರೆ ಮತ್ತು ಆತನನ್ನು ಭಾರತದಿಂದ ಗಡಿಪಾರು ಮಾಡುವಂತೆ (extradition) ಆಗ್ರಹಿಸಿದ್ದಾರೆ.

ವಿಜಯವಾಡ ಮೂಲದ 38 ವರ್ಷದ ಶಶಿಕಲಾ ನಾರಾ ಮತ್ತು ಅವರ ಆರು ವರ್ಷದ ಮಗ ಅನೀಶ್ ನಾರಾ ಅವರನ್ನು 2017ರಲ್ಲಿ ನ್ಯೂಜೆರ್ಸಿಯ ಅವರ ಅಪಾರ್ಟ್‌ಮೆಂಟ್‌ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಆರೋಪಿ ಯಾರು?

ಈಗ, ಯುಎಸ್ ಅಧಿಕಾರಿಗಳು ಈ ಡಬಲ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಪ್ರಜೆಯಾದ ನಝೀರ್ ಹಮೀದ್ (Nazeer Hameed) ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಹತ್ಯೆ ನಡೆದ ಆರು ತಿಂಗಳ ನಂತರ ನಝೀರ್ ಹಮೀದ್ ಭಾರತಕ್ಕೆ (ಚೆನ್ನೈಗೆ) ಪರಾರಿಯಾಗಿದ್ದರು.

ಪ್ರಮುಖ ಸಾಕ್ಷ್ಯ: ಡಿಎನ್‌ಎ ಹೊಂದಾಣಿಕೆ

ನಝೀರ್ ಹಮೀದ್ ಅವರು ಕೊಲೆಗೀಡಾದ ಶಶಿಕಲಾ ಅವರ ಪತಿಯೊಂದಿಗೆ ನ್ಯೂಜೆರ್ಸಿಯ ಒಂದು ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದರು ಮತ್ತು ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಘಟನೆಯ ನಂತರ, ಅಪರಾಧ ಸ್ಥಳದಲ್ಲಿ ದೊರೆತ ಒಂದು ರಕ್ತದ ಹನಿ ಮಾದರಿಯು (blood droplet) ನ ಶಶಿಕಲಾ ಅವರ ಪತಿ ಹನು ನಾರಾ ಅವರಿಗೆ ಸೇರಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಯಿತು. ಅನಂತರ ಅನುಮಾನವಿದ್ದ ನಝೀರ್‌ ಅವರ ಬಳಿ DNA ಮಾದರಿ ನೀಡುವಂತೆ ಪೊಲೀಸರು ಕೇಳಿಕೊಂಡಿರುತ್ತಾರೆ ಆದರೆ ನಝೀರ್‌ ಹಮೀದ್‌ ಡಿಎನ್‌ಎ ಮಾದರಿ ನೀಡುವ ಮನವಿಯನ್ನು ತಿರಸ್ಕರಿಸಿದ ನಂತರ, ತನಿಖಾಧಿಕಾರಿಗಳು ನ್ಯಾಯಾಲಯದ ಆದೇಶದ ಮೂಲಕ ಅವರು ಭಾರತದಲ್ಲಿ ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಯಿಂದ ಅವರ ಕಚೇರಿ ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡರು.

2024ರ ಸೆಪ್ಟೆಂಬರ್‌ನಲ್ಲಿ ಲ್ಯಾಪ್‌ಟಾಪ್ ಅನ್ನು ಯುಎಸ್‌ಗೆ ಕಳುಹಿಸಲಾಯಿತು. ಅಂತಿಮವಾಗಿ, ಈ ಲ್ಯಾಪ್‌ಟಾಪ್‌ನಿಂದ ಪಡೆದ ಡಿಎನ್‌ಎ ಮಾದರಿಯು ಅಪರಾಧ ಸ್ಥಳದಲ್ಲಿ ದೊರೆತ ರಕ್ತದ ಹನಿಯ ಡಿಎನ್‌ಎ ಜೊತೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ.

ಗಡಿಪಾರಿಗೆ ಆಗ್ರಹ

ಪ್ರಸ್ತುತ, ನ್ಯೂಜೆರ್ಸಿಯ ಬರ್ಲಿಂಗ್‌ಟನ್ ಕೌಂಟಿ ಪ್ರಾಸಿಕ್ಯೂಟರ್, ನಝೀರ್ ಹಮೀದ್‌ ಅವರನ್ನು ಯುಎಸ್‌ಗೆ ಗಡಿಪಾರು ಮಾಡುವಂತೆ (Extradition) ಭಾರತ ಮತ್ತು ಅಮೆರಿಕದ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಗಡಿಪಾರು ಪ್ರಕ್ರಿಯೆಗಳು ವಿಳಂಬವಿಲ್ಲದೆ ನಡೆಯಬೇಕು ಎಂದು ಅವರು ಹೇಳಿದ್ದಾರೆ. ನಝೀರ್ ಹಮೀದ್ ಮೇಲೆ ಶಶಿಕಲಾ ಅವರ ಪತಿ ಹನು ನಾರಾ ಅವರನ್ನು ಹಿಂದೆ ಹಿಂಬಾಲಿಸಿದ (stalking) ಆರೋಪವೂ ಇತ್ತು ಎಂದು ವರದಿಯಾಗಿದೆ. ಕೊಲೆಗೆ ನಿಖರವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.