ಬೆಂಗಳೂರು: ನವೆಂಬರ್ 30 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಧಿಕೃತ ಇ-ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆ ಸಂದೇಶವೊಂದು ಬಂದಿದ್ದು, ನಗರದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಬೆದರಿಕೆ ಸಂದೇಶದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸೇರಿದಂತೆ ನಗರದ ಹಲವು ಪ್ರಮುಖ ಮಾಲ್‌ಗಳನ್ನು ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿದೆ.
ಇ-ಮೇಲ್‌ನಲ್ಲೇನಿತ್ತು?
'ಮೊಹಿತ್ ಕುಮಾರ್' ಎಂಬ ಹೆಸರಿನಲ್ಲಿ ಬಂದ ಈ ಇ-ಮೇಲ್, "ಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಂ" ನಿಂದ ಎಚ್ಚರಿಕೆ ಎಂದು ಉಲ್ಲೆಖವಾಗಿದೆ. ಬೆದರಿಕೆ ಸಂದೇಶದಲ್ಲಿ, "ಇದು ಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಂನಿಂದ ಬಂದಿರುವ ಎಚ್ಚರಿಕೆ. ನಾವು ರಾತ್ರಿ 7 ಗಂಟೆಯ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಓರಿಯನ್ ಮಾಲ್, ಲೂಲೂ ಮಾಲ್, ಫೋರಂ ಸೌತ್ ಮಾಲ್, ಮಂತ್ರಿ ಸ್ಕ್ವೇರ್ ಮಾಲ್ ಮತ್ತು ಲೂಲೂ ಮಾಲ್‌ಗಳಲ್ಲಿ ಬಾಂಬ್ ಸ್ಫೋಟಿಸಲು ಗುರಿಯಾಗಿದ್ದೇವೆ. ನಮ್ಮ ಅಲ್ಲಾ ಮತ್ತು ನಮ್ಮ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಾಸ್ಟರ್ ಮೊಹಿತ್‌ಗೆ ಧನ್ಯವಾದಗಳು..." ಎಂದು ಬರೆಯಲಾಗಿದೆ.
ಪ್ರಕರಣ ದಾಖಲು ಮತ್ತು ಭದ್ರತೆ ಹೆಚ್ಚಳ
ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 173 ರ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಇ-ಮೇಲ್ ಕಳುಹಿಸಿದ ಮೂಲ ಮತ್ತು ವ್ಯಕ್ತಿಯನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇ-ಮೇಲ್‌ನಲ್ಲಿ ಹೆಸರಿಸಲಾದ ಎಲ್ಲಾ ಮಾಲ್‌ಗಳ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳು ಆಯಾ ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯವನ್ನು ನಡೆಸಿವೆ.ಪ್ರಾಥಮಿಕ ತನಿಖೆಯಲ್ಲಿ ಇದು ಹುಸಿ ಬೆದರಿಕೆ ಇರಬಹುದೇ ಅಥವಾ ನಿಜವಾದ ಬೆದರಿಕೆಯೇ ಎಂದು ಪರಿಶೀಲಿಸಲಾಗುತ್ತಿದೆ. ಆದಾಗ್ಯೂ, ಸಾರ್ವಜನಿಕ ಸುರಕ್ಷತೆಗಾಗಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.