ನವದೆಹಲಿ: ದೇಶಾದ್ಯಂತ ಇರುವ ಎಲ್ಲಾ ರಾಜ್ಯ ವಕೀಲರ ಪರಿಷತ್ತುಗಳಲ್ಲಿ (State Bar Councils) ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಜಾರಿಗೆ ತರಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಈ ಮೀಸಲಾತಿಯನ್ನು ಜಾರಿಗೆ ತರಲು, ಭಾರತೀಯ ವಕೀಲರ ಪರಿಷತ್ತು (BCI) ತನ್ನ ಅಸ್ತಿತ್ವದಲ್ಲಿರುವ ನಿಯಮಗಳನ್ನು ತಕ್ಷಣವೇ ತಿದ್ದುಪಡಿ ಮಾಡಿದಂತೆ ಅರ್ಥೈಸಿಕೊಂಡು ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಪದಾಧಿಕಾರಿ ಹುದ್ದೆಗಳಿಗೂ ಮೀಸಲಾತಿ ಅನ್ವಯ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠವು, ಮೀಸಲಾತಿಯು ಕೇವಲ ಸದಸ್ಯತ್ವ ಸ್ಥಾನಗಳಿಗೆ ಮಾತ್ರವಲ್ಲದೆ, ಪ್ರತಿ ರಾಜ್ಯ ವಕೀಲರ ಪರಿಷತ್‌ನ ಪದಾಧಿಕಾರಿ ಹುದ್ದೆಗಳಿಗೂ ಅನ್ವಯವಾಗಬೇಕು ಎಂದು ಸ್ಪಷ್ಟಪಡಿಸಿದೆ.ಈ ಕ್ರಮವು ದೇಶದ ಸಾಂವಿಧಾನಿಕ ಮೌಲ್ಯಗಳು ಮತ್ತು ಲಿಂಗ ಸಮಾನತೆಯ ಕುರಿತ ಇತ್ತೀಚಿನ ಕಾನೂನು ಸುಧಾರಣೆಗಳಿಗೆ ಅನುಗುಣವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
"ಸಾಂವಿಧಾನಿಕ ಮೌಲ್ಯಗಳು, ಇತ್ತೀಚಿನ ಶಾಸಕಾಂಗದ ಕ್ರಮಗಳು ಹಾಗೂ ಈ ನ್ಯಾಯಾಲಯ ಕಾಲಕಾಲಕ್ಕೆ ಹೊರಡಿಸಿದ ಆದೇಶಗಳನ್ನು ಪರಿಗಣಿಸಿ, ಪ್ರತಿ ರಾಜ್ಯ ವಕೀಲರ ಪರಿಷತ್‌ನಲ್ಲಿ ಶೇ 30ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲಿಡುವಂತೆ BCI ನಿಯಮಾವಳಿ ರೂಪಿಸುತ್ತದೆ ಎಂಬುದು ನಮ್ಮ ನಿರೀಕ್ಷೆ," ಎಂದು ನ್ಯಾಯಾಲಯ ಹೇಳಿದೆ.
ಡಿಸೆಂಬರ್ 8 ರೊಳಗೆ ಅನುಸರಣಾ ವರದಿ ಅಗತ್ಯ
ಈ ಐತಿಹಾಸಿಕ ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಮೀಸಲಾತಿ ಜಾರಿಗೆ ತಂದ ಕುರಿತಂತೆ ಡಿಸೆಂಬರ್ 8ರೊಳಗೆ ಭಾರತೀಯ ವಕೀಲರ ಪರಿಷತ್ (BCI) ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ಕೇಂದ್ರ ಮತ್ತು ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಮಹಿಳೆಯರು ಮತ್ತು ಸಮಾಜದಂಚಿನಲ್ಲಿರುವ ಗುಂಪುಗಳಿಗೆ ಅತ್ಯಂತ ಕಡಿಮೆ ಪ್ರಾತಿನಿಧ್ಯ ದೊರೆತಿದೆ ಎಂದು ಆರೋಪಿಸಿ ವಕೀಲರಾದ ಯೋಗಮಾಯ ಎಂ ಜಿ ಮತ್ತು ಶೆಹ್ಲಾ ಚೌಧರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಈ ಆದೇಶ ಹೊರಬಿದ್ದಿದೆ.