Skip to main content
ವಿಡಿಯೋ
1/3
local

"ಶ್ರೀಕೃಷ್ಣ ಏನು ಯೋಚಿಸುತ್ತಿರಬಹುದು?": ಇಸ್ಕಾನ್‌ ಮುಂಬೈ Vs ಬೆಂಗಳೂರು ದೇವಸ್ಥಾನದ ಸಮರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ!

By Bhavana Gowda
"ಶ್ರೀಕೃಷ್ಣ ಏನು ಯೋಚಿಸುತ್ತಿರಬಹುದು?": ಇಸ್ಕಾನ್‌ ಮುಂಬೈ Vs ಬೆಂಗಳೂರು ದೇವಸ್ಥಾನದ ಸಮರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ!

ಈ ಕಾನೂನು ಸಮರವು ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಅದರ ಶೈಕ್ಷಣಿಕ ಸಂಕೀರ್ಣದ ಮಾಲೀಕತ್ವಕ್ಕೆ ಸಂಬಂಧಿಸಿದೆ.

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಹರೇಕೃಷ್ಣ ದೇವಸ್ಥಾನದ ಮಾಲೀಕತ್ವ ಕುರಿತು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್‌) ಮುಂಬೈ ಮತ್ತು ಇಸ್ಕಾನ್‌ ಬೆಂಗಳೂರು ನಡುವೆ ನಡೆಯುತ್ತಿರುವ ಕಾನೂನು ಸಮರದ ಬಗ್ಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

"ಶ್ರೀ ಕೃಷ್ಣ ಇದೆಲ್ಲದರ ಬಗ್ಗೆ ಏನು ಯೋಚಿಸುತ್ತಿರಬಹುದು?" ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌, ಸತೀಶ್ ಚಂದ್ರ ಶರ್ಮಾ ಮತ್ತು ಪಿ.ಕೆ. ಮಿಶ್ರಾ ಅವರನ್ನೊಳಗೊಂಡ ಪೀಠ, ಈ ಧಾರ್ಮಿಕ ಸಂಸ್ಥೆಗಳ ನಡುವಿನ ವಿವಾದಕ್ಕೆ ಮಾರ್ಮಿಕವಾಗಿ ತರಾಟೆಗೆ ತೆಗೆದುಕೊಂಡಿತು.

ವಿವಾದದ ಮೂಲ ಮತ್ತು ಹಿನ್ನೆಲೆ

ಈ ಕಾನೂನು ಸಮರವು ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಅದರ ಶೈಕ್ಷಣಿಕ ಸಂಕೀರ್ಣದ ಮಾಲೀಕತ್ವಕ್ಕೆ ಸಂಬಂಧಿಸಿದೆ.

ಮೇ 2025ರ ತೀರ್ಪು:

* ಕಳೆದ ಮೇ ತಿಂಗಳಲ್ಲಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ, ಇಸ್ಕಾನ್ ಬೆಂಗಳೂರು ಸಂಸ್ಥೆಯು ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ಸ್ವತಂತ್ರ ಕಾನೂನಾತ್ಮಕ ಅಸ್ತಿತ್ವ ಹೊಂದಿದೆ ಎಂದು ಹೇಳಿತ್ತು.

* ಇಸ್ಕಾನ್ ಬೆಂಗಳೂರು, ಇಸ್ಕಾನ್ ಮುಂಬೈನ ಶಾಖೆಯಲ್ಲ ಮತ್ತು ಬೆಂಗಳೂರು ದೇವಸ್ಥಾನದ ಮಾಲೀಕತ್ವವು ಅದಕ್ಕೆ ಸೇರಿದ್ದು ಎಂದು ದೃಢಪಡಿಸಿತ್ತು.

* ಈ ತೀರ್ಪಿನ ಮೂಲಕ, ಇಸ್ಕಾನ್ ಮುಂಬೈ ಪರವಾಗಿ 2011ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು.

ಮರುಪರಿಶೀಲನೆ ಅರ್ಜಿ ಸಲ್ಲಿಕೆ:

ಸುಪ್ರೀಂ ಕೋರ್ಟ್‌ನ ಮೇ 16ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಇಸ್ಕಾನ್ ಮುಂಬೈ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ನವೆಂಬರ್ 8ರಂದು ಈ ಮರುಪರಿಶೀಲನಾ ಅರ್ಜಿ ವಿಚಾರಣೆಗೆ ಬಂದಾಗ, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರಿದ್ದ ಪೀಠದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು:

* ನ್ಯಾಯಮೂರ್ತಿ ಮಸಿಹ್: ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದರು.

* ನ್ಯಾಯಮೂರ್ತಿ ಮಹೇಶ್ವರಿ: ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದರು.

ನ್ಯಾಯಾಧೀಶರ ನಡುವೆ ಭಿನ್ನ ತೀರ್ಪು ಬಂದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಅವರ ಅಂಗಳಕ್ಕೆ ಕಳುಹಿಸಲಾಯಿತು. ಬಳಿಕ, ಈ ವಿಷಯವನ್ನು ಆಲಿಸಲು ಸಿಜೆಐ ಅವರು ತ್ರಿಸದಸ್ಯ ಪೀಠವನ್ನು ರಚಿಸಿದರು.

ಮತ್ತೆ ಡಿಸೆಂಬರ್ 3 ರಂದು ತ್ರಿಸದಸ್ಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಆಗ ಇಸ್ಕಾನ್ ಮುಂಬೈ ಪರ ವಕೀಲರು (ಕಪಿಲ್ ಸಿಬಲ್) ಇಸ್ಕಾನ್ ಮುಂಬೈ ವಾಸ್ತವವಾಗಿ ಮಾತೃ ಸಂಘ (Mother Organisation) ಆಗಿದೆ ಮತ್ತು ಇಸ್ಕಾನ್ ಬೆಂಗಳೂರು ಅದರ ಅಂಗಸಂಸ್ಥೆ (Affiliate) ಮಾತ್ರ. ಹೀಗಾಗಿ ವಿವಾದಿತ ದೇವಾಲಯದ ಮಾಲೀಕತ್ವವನ್ನು ಅದು ಪಡೆಯಲು ಸಾಧ್ಯವಿಲ್ಲ.

ಇಸ್ಕಾನ್ ಬೆಂಗಳೂರು ಪರ ವಕೀಲರು ಮಧ್ಯಸ್ಥಿಕೆ ಪ್ರಯತ್ನಗಳು ನಡೆದಿವೆ. ಬೆಂಗಳೂರು ಸೊಸೈಟಿ 'ಅಕ್ಷಯ ಪಾತ್ರ' ಯೋಜನೆಯನ್ನು ಪ್ರಾರಂಭಿಸಿದೆ ಮತ್ತು ಎರಡು ಶತಕೋಟಿ ಭೋಜನವನ್ನು ನೀಡಿದೆ (ಸಮಾಜಕ್ಕೆ ತಮ್ಮ ಕೊಡುಗೆಯನ್ನು ಒತ್ತಿ ಹೇಳಿದರು). ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಂಬೈ ಇಸ್ಕಾನ್‌ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ಬೆಂಗಳೂರಿನ ಇಸ್ಕಾನ್ ತಮಗೆ ಸೇರಿದ್ದನ್ನು ಪಡೆದುಕೊಂಡಿದೆ ಎಂದು ನೇರವಾಗಿ ದೂರಿದರು.

ಪೀಠದ ಮಾರ್ಮಿಕ ನುಡಿ:

ಎರಡೂ ಕಡೆಯವರ ವಾದ ಮತ್ತು ವಿವಾದವನ್ನು ಆಲಿಸಿದ ಪೀಠವು, ಪ್ರತಿಕ್ರಿಯೆಗಾಗಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು. ಆದರೆ ವಿಚಾರಣೆಯ ಕೊನೆಗೆ, ಪೀಠವು ಮಾರ್ಮಿಕವಾದ ಹೇಳಿಕೆ ನೀಡಿತು "ಸ್ಪಷ್ಟವಾಗಿಯೂ ಎರಡೂ ಕಡೆಯವರು ಯಾವುದೂ ತಮಗೆ ಸೇರಿದ್ದಲ್ಲ (ಆದರೆ ಶ್ರೀಕೃಷ್ಣನಿಗೆ ಸೇರಿದ್ದು) ಎಂದು ಭಾವಿಸಬೇಕು."