Skip to main content
ವಿಡಿಯೋ
1/3
general

ಗೋವಾ ನೈಟ್‌ ಕ್ಲಬ್‌ ದುರಂತ: ಸಿಲಿಂಡರ್ ಸ್ಫೋಟದ ಹಿಂದೆ 'ಎಲೆಕ್ಟ್ರಾನಿಕ್ ಪಟಾಕಿ' ಕಿಡಿ! 25 ಮಂದಿ ಸಾ*ವು

By Bhavana Gowda
ಗೋವಾ ನೈಟ್‌ ಕ್ಲಬ್‌ ದುರಂತ: ಸಿಲಿಂಡರ್ ಸ್ಫೋಟದ ಹಿಂದೆ 'ಎಲೆಕ್ಟ್ರಾನಿಕ್ ಪಟಾಕಿ' ಕಿಡಿ! 25 ಮಂದಿ ಸಾ*ವು

ಗೋವಾದ ಜನಪ್ರಿಯ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಸಾ*ವನ್ನಪ್ಪಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಪಣಜಿ: ಗೋವಾದ ಜನಪ್ರಿಯ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಸಾ*ವನ್ನಪ್ಪಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಉತ್ತರ ಗೋವಾದ ಅರಪೊರಾದ ರೋಮಿಯೋ ಲೇನ್‌ನಲ್ಲಿ ತಡರಾತ್ರಿ 1 ಗಂಟೆಗೆ ನಡೆದ ಈ ದುರಂತಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋವೊಂದು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದನ್ನು ಇದೀಗ ಬಹಿರಂಗಪಡಿಸಿದೆ.ಸುಮಾರು ನೂರಕ್ಕೂ ಹೆಚ್ಚು ಪ್ರವಾಸಿಗರು 'ಬ್ಯಾಂಗರ್ ನೈಟ್' ಶೋವನ್ನು ಸಂಭ್ರಮಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡಿತ್ತು.

ವಿಡಿಯೋದಲ್ಲಿ ಸ್ಪಷ್ಟವಾದ ಬೆಂಕಿಯ ಮೂಲ

ಈ ಘಟನೆಗೆ ಸಂಬಂಧಿಸಿದಂತೆ ವೈರಲ್ ಆಗಿರುವ ಹೊಸ ವಿಡಿಯೋ ಕ್ಲಬ್‌ನಲ್ಲಿ ಅಗ್ನಿ ಅನಾಹುತಕ್ಕೆ ನಿಖರ ಕಾರಣವನ್ನು ದೃಢಪಡಿಸಿದೆ. ನೈಟ್‌ಕ್ಲಬ್‌ನ ಒಳಗಡೆ ಲೈವ್ ಮ್ಯೂಸಿಕ್ ಮತ್ತು ಡ್ಯಾನ್ಸ್ ಪ್ರದರ್ಶನದ ವೇಳೆ ಎಲೆಕ್ಟ್ರಾನಿಕ್ ಫೈರ್‌ಕ್ರ್ಯಾಕರ್ (ಪಟಾಕಿ) ಬಳಸಲಾಗಿದೆ. ಈ ಪಟಾಕಿಯಿಂದ ಚಿಮ್ಮಿದ ಬೆಂಕಿಯ ಕಿಡಿಯು ನೇರವಾಗಿ ಕ್ಲಬ್‌ನ ಸೀಲಿಂಗ್‌ಗಳಿಗೆ ಹರಡಿದೆ.

ಕ್ಲಬ್‌ನ ಸೀಲಿಂಗ್‌ಗಳನ್ನು ಬಿದಿರಿನ ಹಲಗೆಗಳು, ತಾಳೆ ಎಲೆಗಳು ಸೇರಿದಂತೆ ಅತ್ಯಂತ ಬೇಗನೆ ಉರಿಯುವ ವಸ್ತುಗಳಿಂದ ನಿರ್ಮಿಸಿದ್ದರಿಂದ, ಬೆಂಕಿ ಅತ್ಯಂತ ವೇಗವಾಗಿ ಹರಡಿ ಅನಾಹುತ ಸೃಷ್ಟಿಸಿತು. ದೊಡ್ಡ ಪ್ರಮಾಣದ ಬೆಂಕಿಯ ಜೊತೆಗೆ ಸಿಲಿಂಡರ್ ಸ್ಫೋಟಗೊಂಡ ಕಾರಣ ಪರಿಸ್ಥಿತಿ ಇನ್ನಷ್ಟು ಭೀಕರವಾಗಿತ್ತು.

ಸಾವಿಗೆ ಸುಟ್ಟ ಗಾಯಗಳಲ್ಲ, ಉಸಿರುಗಟ್ಟುವಿಕೆ ಕಾರಣ!

ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಈ ಭೀಕರ ದುರಂತದಲ್ಲಿ ಹೆಚ್ಚಿನ ಸಾವುಗಳು ಸುಟ್ಟ ಗಾಯಗಳಿಂದಲ್ಲ, ಬದಲಾಗಿ ದಟ್ಟ ಹೊಗೆಯಿಂದ ಉಂಟಾದ ಉಸಿರುಗಟ್ಟುವಿಕೆಯಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ. ಒಟ್ಟು 25 ಮಂದಿ ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ 14 ಮಂದಿ ಕ್ಲಬ್‌ನ ಸಿಬ್ಬಂದಿ ಸದಸ್ಯರು ಮತ್ತು ನಾಲ್ವರು ಪ್ರವಾಸಿಗರು ಸೇರಿದ್ದಾರೆ.ಈ ಭೀಕರತೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. "ನೋಡ ನೋಡುತ್ತಲೇ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿವೆ. ಈ ದೃಶ್ಯವೇ ಭಯಾನಕವಾಗಿದೆ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕ್ಲಬ್ ಮಾಲೀಕರು ಮತ್ತು ವ್ಯವಸ್ಥಾಪಕರ ಬಂಧನ

ಅಗ್ನಿ ಸುರಕ್ಷತಾ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿ ಈ ದುರಂತಕ್ಕೆ ಕಾರಣರಾದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕ್ಲಬ್‌ನ ಪ್ರಧಾನ ವ್ಯವಸ್ಥಾಪಕನನ್ನು (General Manager) ಬಂಧಿಸಲಾಗಿದೆ. ನೈಟ್‌ಕ್ಲಬ್‌ನ ಮಾಲೀಕನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.