Skip to main content
ವಿಡಿಯೋ
crime

ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ: ಅತ್ಯಾಚಾರ ಪ್ರಕರಣಗಳ ವರ್ಗಾವಣೆ ಅರ್ಜಿ ವಜಾ

By Bhavana Gowda
ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ: ಅತ್ಯಾಚಾರ ಪ್ರಕರಣಗಳ ವರ್ಗಾವಣೆ ಅರ್ಜಿ ವಜಾ

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠವು ಮನವಿಯನ್ನು ಆಲಿಸಿತು.

ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್) ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ನಡೆಸುತ್ತಿರುವ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ನ ಪೀಠ ತಿರಸ್ಕರಿಸಿದೆ.

ಯಾಕೆ ವರ್ಗಾವಣೆ ಕೋರಲಾಗಿತ್ತು?

ಪ್ರಜ್ವಲ್ ರೇವಣ್ಣ ಅವರು ಪ್ರಕರಣಗಳ ವರ್ಗಾವಣೆಗೆ ಮನವಿ ಸಲ್ಲಿಸಲು ಮುಖ್ಯ ಕಾರಣ, ಅದೇ ವಿಚಾರಣಾ ನ್ಯಾಯಾಧೀಶರು ಈ ಹಿಂದೆ ಮತ್ತೊಂದು ಪ್ರತ್ಯೇಕ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ರನ್ನು ತಪ್ಪಿತಸ್ಥರೆಂದು ಘೋಷಿಸಿ ಆಜೀವ ಶಿಕ್ಷೆ ವಿಧಿಸಿದ್ದರು.ಈ ಹಿನ್ನೆಲೆಯಲ್ಲಿ, ಪ್ರಜ್ವಲ್ ಅವರು ಪ್ರಸ್ತುತ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಧೀಶರು ತಮ್ಮ ವಿರುದ್ಧ ಪಕ್ಷಪಾತದಿಂದ ನಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.ಈ ಹಿಂದಿನ ಪ್ರಕರಣದಲ್ಲಿ ನ್ಯಾಯಾಧೀಶರು ಮಾಡಿದ ಕೆಲವು ಟಿಪ್ಪಣಿಗಳನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿ, ನ್ಯಾಯಾಧೀಶರ ನಿಲುವಿನ ಬಗ್ಗೆ ಪ್ರಶ್ನಿಸಿದ್ದರು.

ಸುಪ್ರೀಂ ಕೋರ್ಟ್ ಅಭಿಪ್ರಾಯವೇನು?

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠವು ಮನವಿಯನ್ನು ಆಲಿಸಿತು.ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣದ ಸಾಕ್ಷ್ಯಗಳು ಮತ್ತು ಕರ್ನಾಟಕ ಹೈಕೋರ್ಟ್ ನೀಡಿದ್ದ ಅಭಿಪ್ರಾಯಗಳನ್ನು ಪರಿಗಣಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯಾಧೀಶರು ಮಾಡಿದ ಆ ಟಿಪ್ಪಣಿಗಳ ಆಧಾರದ ಮೇಲೆ ಅವರನ್ನು ಪಕ್ಷಪಾತಿಯಾಗಿದ್ದಾರೆ ಎಂದು ಹೇಳುವುದಕ್ಕೆ ಅಥವಾ ಪ್ರಕರಣವು ಪೂರ್ವ ನಿರ್ಧರಿತವಾಗಿದೆ ಎನ್ನುವುದಕ್ಕೆ ಯಾವುದೇ ನ್ಯಾಯಸಮ್ಮತ ಆಧಾರಗಳು ಕಂಡುಬರುತ್ತಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.

"ವಿಚಾರಣೆ ವರ್ಗಾಯಿಸಲು ನ್ಯಾಯಸಮ್ಮತ ಕಾರಣ ಕಂಡುಬರುತ್ತಿಲ್ಲ" ಎಂದು ತಿಳಿಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ತಿರಸ್ಕರಿಸಿತು. ಈ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್‌ನಲ್ಲಿ ವಜಾಗೊಳಿಸಿದ ನಂತರ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಕೀಲರ ವರ್ತನೆಯ ಬಗ್ಗೆ ಟಿಪ್ಪಣಿ

ಇದೇ ವೇಳೆ, ಪ್ರಜ್ವಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ನ್ಯಾಯಾಧೀಶರ ಟಿಪ್ಪಣಿಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, "ವಕೀಲರು ನಿರಂತರ ಬದಲಾಯಿಸಿದ್ದಕ್ಕೆ ವಿಚಾರಣಾ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ಸೂಕ್ತವಾಗಿಯೇ ಇದೆ" ಎಂದರು.ವಕೀಲರ ವಿರುದ್ಧದ ಟಿಪ್ಪಣಿಗಳನ್ನು ತೆಗೆದುಹಾಕುವಂತೆ ಮತ್ತೊಬ್ಬ ಹಿರಿಯ ನ್ಯಾಯವಾದಿ ದುಷ್ಯಂತ್‌ ದವೆ ಕೋರಿದರು. ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಲಿಲ್ಲ.ನ್ಯಾಯಮೂರ್ತಿ ಬಾಗ್ಚಿ ಅವರು, "ವಕೀಲರು ನ್ಯಾಯಾಂಗದ ಮೇಲೆ ಒತ್ತಡ ಹೇರುವಂತಿಲ್ಲ" ಎಂದು ಹೇಳಿದರೆ, ಸಿಜೆಐ ಕಾಂತ್‌ ಅವರು, ವಕೀಲರು ಬೇಕಿದ್ದರೆ ಹೈಕೋರ್ಟ್‌ ಎದುರು ಕ್ಷಮೆ ಯಾಚಿಸಬಹುದು ಎಂದು ಸಲಹೆ ನೀಡಿದರು.

ಪ್ರಜ್ವಲ್ ವಿರುದ್ಧ ಇರುವ ಪ್ರಮುಖ ಪ್ರಕರಣಗಳು

ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿದ 2,900ಕ್ಕೂ ಹೆಚ್ಚು ವಿಡಿಯೋಗಳು ಹರಿದಾಡಿದ ಹಿನ್ನೆಲೆಯಲ್ಲಿ, ಐಪಿಸಿ ಸೆಕ್ಷನ್ 376(2)(ಎನ್), 354 ಎ, 354 ಬಿ, 354 ಸಿ, 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 66 ಇ ಅಡಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ, ಮನೆಗೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಡಿಷನಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಪ್ರಜ್ವಲ್‌ಗೆ ಆಜೀವ ಶಿಕ್ಷೆ ವಿಧಿಸಿದ್ದರು. ಈ ತೀರ್ಪಿನ ವಿರುದ್ಧದ ಮೇಲ್ಮನವಿ ಸದ್ಯ ಹೈಕೋರ್ಟ್‌ನಲ್ಲಿ ಬಾಕಿ ಇದೆ.