Skip to main content
ವಿಡಿಯೋ
globalnews

ಕ್ರಿಸ್‌ಮಸ್‌ ದಿನದಂದು ಜಾಗತಿಕ ಶಾಂತಿ ಒಪ್ಪಂದಕ್ಕೆ ಪೋಪ್ ಕರೆ: ರಷ್ಯಾದ ನಿರಾಕರಣೆಗೆ ಬೇಸರ

By Bhavana Gowda
ಕ್ರಿಸ್‌ಮಸ್‌ ದಿನದಂದು ಜಾಗತಿಕ ಶಾಂತಿ ಒಪ್ಪಂದಕ್ಕೆ ಪೋಪ್ ಕರೆ: ರಷ್ಯಾದ ನಿರಾಕರಣೆಗೆ ಬೇಸರ

ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಜಗತ್ತಿನಾದ್ಯಂತ 'ಶಾಂತಿಯ ದಿನ'ವನ್ನಾಗಿ ಆಚರಿಸಲು ಜಾಗತಿಕ ಒಪ್ಪಂದವೊಂದನ್ನು ಮಾಡಿಕೊಳ್ಳುವಂತೆ 14ನೇ ಪೋಪ್ ಲಿಯೋ ಕರೆ ನೀಡಿದ್ದಾರೆ.

ರೋಮ್: ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಜಗತ್ತಿನಾದ್ಯಂತ 'ಶಾಂತಿಯ ದಿನ'ವನ್ನಾಗಿ ಆಚರಿಸಲು ಜಾಗತಿಕ ಒಪ್ಪಂದವೊಂದನ್ನು ಮಾಡಿಕೊಳ್ಳುವಂತೆ 14ನೇ ಪೋಪ್ ಲಿಯೋ ಕರೆ ನೀಡಿದ್ದಾರೆ. ಸದ್ಭಾವನೆಯುಳ್ಳ ಎಲ್ಲಾ ಜನರು ಕನಿಷ್ಠ ಈ ಪವಿತ್ರ ದಿನದಂದಾದರೂ ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರೋಮ್ ಬಳಿಯ ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್, ಈ ಕುರಿತಾದ ತಮ್ಮ ವಿನಂತಿಯನ್ನು ರಷ್ಯಾ ತಿರಸ್ಕರಿಸಿರುವುದು ತಮಗೆ ತೀವ್ರ ದುಃಖ ತಂದಿದೆ ಎಂದು ತಿಳಿಸಿದರು.

2022ರಿಂದ ಉಕ್ರೇನ್ ಮೇಲೆ ಸತತ ದಾಳಿ ನಡೆಸುತ್ತಿರುವ ರಷ್ಯಾ, ಕದನ ವಿರಾಮಕ್ಕಾಗಿ ಮಾಡಿಕೊಂಡ ಮನವಿಗಳನ್ನು ಪದೇ ಪದೇ ತಿರಸ್ಕರಿಸುತ್ತಲೇ ಬಂದಿದೆ. ಕ್ರಿಸ್‌ಮಸ್ ಪ್ರಯುಕ್ತ 24 ಗಂಟೆಗಳ ಶಾಂತಿ ಒಪ್ಪಂದಕ್ಕೂ ಮಾಸ್ಕೋ ಒಪ್ಪದಿದ್ದರೂ, ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂಬ ಭರವಸೆಯನ್ನು ಪೋಪ್ ವ್ಯಕ್ತಪಡಿಸಿದ್ದಾರೆ. ರಷ್ಯಾದ ನಿರಂತರ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ನಾಗರಿಕರು ಬಲಿಯಾಗುತ್ತಿದ್ದಾರೆ. ಚಳಿಗಾಲದ ಹಿಮಪಾತದ ನಡುವೆಯೇ ಸಾವಿರಾರು ಜನರು ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಉಕ್ರೇನ್ ತನ್ನ ಪೂರ್ವ ಭಾಗದ ಪಟ್ಟಣದಿಂದ ಸೈನ್ಯವನ್ನು ಹಿಂತೆಗೆದುಕೊಂಡಿದೆ.

ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಈ ಯುದ್ಧವನ್ನು ಕೊನೆಗೊಳಿಸಲು ಮಿಯಾಮಿಯಲ್ಲಿ ಅಮೆರಿಕದ ಅಧಿಕಾರಿಗಳೊಂದಿಗೆ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿದರೂ ಯಾವುದೇ ಸಕಾರಾತ್ಮಕ ಫಲಿತಾಂಶ ಬಂದಿಲ್ಲ. ಇತ್ತೀಚೆಗಷ್ಟೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದ ಪೋಪ್, ಉಕ್ರೇನ್‌ಗೆ ಭೇಟಿ ನೀಡುವ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಆದರೆ ಪ್ರವಾಸದ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಯುರೋಪಿಯನ್ ರಾಷ್ಟ್ರಗಳ ರಾಜತಾಂತ್ರಿಕ ಪಾಲ್ಗೊಳ್ಳುವಿಕೆ ಇಲ್ಲದೆ ಶಾಂತಿ ಅಸಾಧ್ಯ ಎಂದ ಪೋಪ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಶಾಂತಿ ಯೋಜನೆಯು ಅಟ್ಲಾಂಟಿಕ್ ಒಕ್ಕೂಟದ ಸಂಬಂಧಗಳಲ್ಲಿ ಏರುಪೇರು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.