ಮಧುರೈ: "ದೀಪ ಬೆಳಗಿಸುವ ದಿನ ಖಂಡಿತಾ ಬರಲಿದೆ," ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಹೇಳಿದ್ದಾರೆ. ತಿರುಪರನ್‌ಕುಂಡ್ರನ್ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಆದೇಶ ನೀಡಿದ ಕೆಲವೇ ದಿನಗಳಲ್ಲಿ ಅವರು ಈ ಮಾರ್ಮಿಕ ನುಡಿಗಳನ್ನಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಡಿಸೆಂಬರ್ 27 ರಂದು ನಡೆದ 12ನೇ ಶತಮಾನದ ತಮಿಳು ಕವಿ ಕಂಬನ್ ಅವರ 'ರಾಮಾಯಣ' ಕುರಿತಾದ ‘ಕಂಬನ್ ಮತ್ತು ವೈಷ್ಣವಂ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದೀಪದ ನಂಟಿನ ಬಗ್ಗೆ ಲಘು ದಾಟಿಯ ಮಾತು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿಗಳು ದೀಪದೊಂದಿಗಿನ ತಮ್ಮ ನಂಟಿನ ಬಗ್ಗೆ ಲಘು ಧಾಟಿಯಲ್ಲಿ ಮಾತನಾಡಿದರು. "ನನಗೂ ದೀಪಕ್ಕೂ ಏನು ಸಂಬಂಧವೋ ತಿಳಿಯದು. ಇಂದಿಲ್ಲಿ ಸಂತೋಷದಿಂದ ದೀಪ ಬೆಳಗಿಸಲು ಬಂದೆ, ಆದರೆ 'ಸರ್, ನೀವು ದೀಪ ಬೆಳಗಿಸಬಾರದು' ಎಂದು ತಿಳಿಸಲಾಯಿತು. ಇದರಿಂದ ತುಸು ನಿರಾಶೆಯಾದರೂ, ದೀಪ ಬೆಳಗುವ ಕಾಲ ಶೀಘ್ರದಲ್ಲೇ ಬರಲಿದೆ ಎಂಬ ದೃಢ ನಂಬಿಕೆ ನನಗಿದೆ," ಎಂದು ಅವರು ತಮಿಳಿನಲ್ಲಿ ತಿಳಿಸಿದರು.
ವಿವಾದದ ಹಿನ್ನೆಲೆ ಏನು?
ಮಧುರೈ ಸಮೀಪದ ತಿರುಪರನ್‌ಕುಂಡ್ರನ್ ಬೆಟ್ಟದ ಮೇಲೆ ದರ್ಗಾ ಇರುವ ಜಾಗದ ಬಳಿಯೇ ಇರುವ ಸುಬ್ರಮಣ್ಯ ಸ್ವಾಮಿ ದೇಗುಲದ ಕಲ್ಲಿನ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಭಕ್ತರಿಗೆ ಅವಕಾಶ ನೀಡುವಂತೆ ನ್ಯಾ. ಸ್ವಾಮಿನಾಥನ್ ಇತ್ತೀಚೆಗೆ ಆದೇಶ ನೀಡಿದ್ದರು.
ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಆಡಳಿತಾರೂಢ ಡಿಎಂಕೆ ಸರ್ಕಾರ ಇದನ್ನು ವಿರೋಧಿಸಿತ್ತು. ಸಂಸತ್ತಿನಲ್ಲಿ ಡಿಎಂಕೆ ಸೇರಿದಂತೆ ವಿರೋಧಪಕ್ಷಗಳು ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆ ಗೊತ್ತುವಳಿಗೆ ಸಹಿ ಹಾಕುವ ಮೂಲಕ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಸರ್ಕಾರದ ಅಧಿಕಾರಿಗಳು ತನ್ನ ಆದೇಶ ಜಾರಿಗೊಳಿಸದಿದ್ದಕ್ಕೆ ನ್ಯಾ. ಸ್ವಾಮಿನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಅಸ್ಮಿತೆಯ ಬಗ್ಗೆ ಸಂಕೋಚ ಬೇಡ
ಸಮಾರಂಭದಲ್ಲಿ ತಮ್ಮನ್ನು ತಾವು "ಆದರ್ಶವಾದಿ" ಎಂದು ಬಣ್ಣಿಸಿಕೊಂಡ ಅವರು, ಹಸ್ತಾಕ್ಷರ ಪಡೆಯಲು ಬಂದ ವಿದ್ಯಾರ್ಥಿಗಳ ಹಣೆಯ ಮೇಲಿದ್ದ ವಿಭೂತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. "ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ತೋರಿಸುವ ಗುರುತುಗಳನ್ನು ಧರಿಸಲು ಯಾರೂ ಸಂಕೋಚ ಪಡಬಾರದು," ಎಂದು ಅವರು ಕರೆ ನೀಡಿದರು.
ಧರ್ಮಕ್ಕೆ ಅಂತಿಮ ಜಯ
ರಾಮಾಯಣದ ಉದಾಹರಣೆ ನೀಡಿದ ನ್ಯಾಯಮೂರ್ತಿಗಳು, "ಧರ್ಮ ಮತ್ತು ಅಧರ್ಮದ ಹೋರಾಟದಲ್ಲಿ ಆರಂಭದಲ್ಲಿ ಧರ್ಮಕ್ಕೆ ಸಂಕಷ್ಟಗಳು ಎದುರಾಗುವುದು ಸಹಜ. ಆದರೆ ಅಂತಿಮವಾಗಿ ಜಯ ಧರ್ಮಕ್ಕೇ ಸಿಗುತ್ತದೆ. ಆ ಜಯದ ಹಾದಿಗೆ ಧೈರ್ಯ, ಶಿಸ್ತು ಮತ್ತು ನಿರಂತರ ಪ್ರಯತ್ನ ಬಹಳ ಮುಖ್ಯ," ಎಂದು ಮಾರ್ಮಿಕವಾಗಿ ಹೇಳಿದರು.