Skip to main content
ವಿಡಿಯೋ
cinema

ತಿಥಿ ಸಿನಿಮಾ ಖ್ಯಾತಿಯ ನಟ ಇನ್ನಿಲ್ಲ...ಸೆಂಚುರಿ ಗೌಡ ಇನ್ನು ನೆನಪು ಮಾತ್ರ..!

By Ram Chethan
ತಿಥಿ  ಸಿನಿಮಾ ಖ್ಯಾತಿಯ ನಟ ಇನ್ನಿಲ್ಲ...ಸೆಂಚುರಿ ಗೌಡ ಇನ್ನು ನೆನಪು ಮಾತ್ರ..!

‘ತಿಥಿ’ ಸಿನಿಮಾದ ಮೂಲಕ ಜನಮನ ಗೆದ್ದ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಪಾತ್ರಧಾರಿಗಳು ಅಲ್ಪ ಅವಧಿಯಲ್ಲಿ ಅಗಲಿದ್ದಾರೆ. ಸರಳ ಬದುಕು, ಸಹಜ ಅಭಿನಯದಿಂದ ಹೆಸರು ಮಾಡಿದ ಈ ಇಬ್ಬರ ನಿಧನವು ಕನ್ನಡ ಚಿತ್ರರಂಗ ಹಾಗೂ ಸಿನಿಪ್ರೇಕ್ಷಕರಿಗೆ ಆಳವಾದ ನೋವು ತಂದಿದೆ.

ಕನ್ನಡ ಚಿತ್ರರಂಗದ ಜನಪ್ರಿಯ ಸಿನಿಮಾ ‘ತಿಥಿ’ಯ ಮೂಲಕ ಮನೆಮಾತಾಗಿದ್ದ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಇನ್ನು ನಮ್ಮೊಂದಿಗೆ ಇಲ್ಲ. ‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಪಾತ್ರ ಮಾಡಿದ ಚನ್ನೇಗೌಡ ಅವರು 2025ರ ನವೆಂಬರ್ 12ರಂದು ನಿಧನರಾಗಿದ್ದರು. ಅವರ ನಿಧನದ ಕೇವಲ ಒಂದೂವರೆ ತಿಂಗಳ ಬಳಿಕ, ಸೆಂಚುರಿ ಗೌಡ ಪಾತ್ರಧಾರಿ ಸಿಂಗ್ರಿಗೌಡ ಅವರು ಜನವರಿ 4ರಂದು ಕೊನೆಯುಸಿರು ಎಳೆದಿದ್ದಾರೆ. ಈ ಇಬ್ಬರ ಅಗಲಿಕೆ ಕನ್ನಡ ಸಿನಿಪ್ರೇಕ್ಷಕರಿಗೆ ದೊಡ್ಡ ನೋವನ್ನುಂಟು ಮಾಡಿದೆ.

ಸೆಂಚುರಿ ಗೌಡ ಪಾತ್ರ ಮಾಡಿದ್ದ ಸಿಂಗ್ರಿಗೌಡ ಅವರಿಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರಿಗೌಡನಕೊಪ್ಪಲು ಗ್ರಾಮದವರು. ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಜನವರಿ 4ರ ರಾತ್ರಿ ನಿಧನರಾದರು. ‘ತಿಥಿ’ ಸಿನಿಮಾದಲ್ಲಿ ಅವರ ಸಹಜ ಅಭಿನಯ ಎಲ್ಲರ ಮನ ಸೆಳೆದಿತ್ತು. ಸಿನಿಮಾ ಹಿಟ್ ಆದ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಿದ್ದು, ಊರಿಗೆ ಬಂದವರು ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಳ್ಳುತ್ತಿದ್ದರು.Arayna Women's Cotton Printed Floral Straight Kurta with Palazzo Pants and Dupatta

ಸಿಂಗ್ರಿಗೌಡ ಅವರು ಸಿನಿಮಾಗೆ ಆಯ್ಕೆಯಾಗಿದ್ದು ಸಹ ಅಚ್ಚರಿಯ ಕಥೆ. ಅವರ ಅಣ್ಣನ ತಿಥಿ ಕಾರ್ಯಕ್ರಮಕ್ಕೆ ‘ತಿಥಿ’ ಚಿತ್ರದ ನಿರ್ದೇಶಕರು ಬಂದಾಗ, ಅವರ ವ್ಯಕ್ತಿತ್ವ ಇಷ್ಟವಾಗಿ ಸೆಂಚುರಿ ಗೌಡ ಪಾತ್ರಕ್ಕೆ ಆಯ್ಕೆ ಮಾಡಿದರು. ಈ ಸಿನಿಮಾಗಾಗಿ ಅವರಿಗೆ ಸುಮಾರು 20 ಸಾವಿರ ರೂಪಾಯಿ ಸಂಭಾವನೆ ದೊರಕಿತ್ತು. ನಂತರ ಅವರು ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೆಲವು ಸಿನಿಮಾ ತಂಡಗಳಿಂದ ಸೂಕ್ತ ಗೌರವ ಮತ್ತು ಹಣ ಸಿಗಲಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.

ಇನ್ನೊಂದೆಡೆ, ಗಡ್ಡಪ್ಪ ಪಾತ್ರ ಮಾಡಿದ ಚನ್ನೇಗೌಡ ಅವರು ಮಂಡ್ಯ ಜಿಲ್ಲೆಯ ನೊದೆಕೊಪ್ಪಲು ಗ್ರಾಮದವರು. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕೆಲ ವರ್ಷಗಳ ಹಿಂದೆ ಪಾರ್ಶ್ವವಾಯು ಬಂದು ಆರೋಗ್ಯ ಗಂಭೀರವಾಗಿತ್ತು. ಹೃದಯ ಸಮಸ್ಯೆ, ಉಸಿರಾಟದ ತೊಂದರೆ, ಶ್ರವಣ ದೋಷ ಸೇರಿದಂತೆ ಹಲವು ಕಾಯಿಲೆಗಳು ಅವರನ್ನು ಕಾಡುತ್ತಿದ್ದವು. ಚಿಕಿತ್ಸೆಗಾಗಿ ಬೇಕಾದಷ್ಟು ಹಣವೂ ಅವರ ಬಳಿ ಇರಲಿಲ್ಲ. ಇದರಿಂದಾಗಿ ಅವರು ಕಳೆದ ವರ್ಷದ ನವೆಂಬರ್ 12ರಂದು ನಿಧನರಾದರು.ಇದನ್ನು ಓದಿ:ಕೋಕಾಪೇಟ್‌ನಲ್ಲಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್: ರಿಷಬ್ ಶೆಟ್ಟಿ–ಪ್ರಶಾಂತ್ ನೀಲ್ ಫೋಟೋ ವೈರಲ್

‘ತಿಥಿ’ ಸಿನಿಮಾದ ಮೂಲಕ ಸಹಜ ಅಭಿನಯದಿಂದ ಜನಮನ ಗೆದ್ದಿದ್ದ ಈ ಇಬ್ಬರು ಕಲಾವಿದರು ಅಲ್ಪ ಸಮಯದ ಅಂತರದಲ್ಲಿ ಅಗಲಿರುವುದು ನಿಜಕ್ಕೂ ದುಃಖದ ಸಂಗತಿ. ಅವರ ಪಾತ್ರಗಳು ಮತ್ತು ಸರಳ ಜೀವನ ಸದಾ ಕನ್ನಡ ಸಿನಿಪ್ರೇಕ್ಷಕರ ನೆನಪಿನಲ್ಲಿ ಉಳಿಯಲಿದೆ.