Skip to main content
ವಿಡಿಯೋ
crime

ಅಮೆರಿಕದಲ್ಲಿ ಹೈದರಾಬಾದ್ ಮೂಲದ ಯುವತಿ ನಿಕಿತಾ ಹತ್ಯೆ: ಹಣದ ವಿವಾದವೇ ಕಾರಣ ಎಂದು ತಂದೆ ಆರೋಪ

By Bhavana Gowda
ಅಮೆರಿಕದಲ್ಲಿ ಹೈದರಾಬಾದ್ ಮೂಲದ ಯುವತಿ ನಿಕಿತಾ ಹತ್ಯೆ: ಹಣದ ವಿವಾದವೇ ಕಾರಣ ಎಂದು ತಂದೆ ಆರೋಪ

ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ಹೈದರಾಬಾದ್ ಮೂಲದ ಯುವತಿ ನಿಕಿತಾ ಗೋದಿಶಾಲಾ (27) ಅವರ ಕೊಲೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ನ್ಯೂಯಾರ್ಕ್/ಹೈದರಾಬಾದ್: ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ಹೈದರಾಬಾದ್ ಮೂಲದ ಯುವತಿ ನಿಕಿತಾ ಗೋದಿಶಾಲಾ (27) ಅವರ ಕೊಲೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ನಿಕಿತಾಳ ಮಾಜಿ ರೂಮ್‌ಮೇಟ್ ಅರ್ಜುನ್ ಶರ್ಮಾ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ನಿಕಿತಾ ತಂದೆ ಆನಂದ್ ಗೋದಿಶಾಲ ಗಂಭೀರವಾಗಿ ಆರೋಪಿಸಿದ್ದಾರೆ.

ಘಟನೆಯ ಹಿನ್ನೆಲೆ:

ಹೊಸ ವರ್ಷದ ಮುನ್ನಾದಿನದಂದು (ಡಿಸೆಂಬರ್ 31) ಮೇರಿಲ್ಯಾಂಡ್‌ನ ಕೊಲಂಬಿಯಾದಲ್ಲಿ ಈ ಘಟನೆ ನಡೆದಿದೆ. ನಿಕಿತಾ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 2 ರಂದು ನಿಕಿತಾ ನಾಪತ್ತೆಯಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಪೊಲೀಸರು ಆಕೆಯ ಅಪಾರ್ಟ್‌ಮೆಂಟ್ ತಪಾಸಣೆ ನಡೆಸಿದಾಗ ಇರಿತದ ಗುರುತುಗಳಿದ್ದ ಶವ ಪತ್ತೆಯಾಗಿತ್ತು.

ತಂದೆಯ ಗಂಭೀರ ಆರೋಪಗಳು:

ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಅವರು ಹಲವು ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ:

* ಹಣಕಾಸಿನ ವಿವಾದ: ಇದು ಪ್ರೇಮ ಪ್ರಕರಣವಲ್ಲ, ಬದಲಾಗಿ ಹಣದ ವಿವಾದ. ಅರ್ಜುನ್ ಶರ್ಮಾ ನಿಕಿತಾಳಿಂದ ಸಾಕಷ್ಟು ಹಣವನ್ನು ಪಡೆದಿದ್ದನು.

* ಭಾರತಕ್ಕೆ ಪರಾರಿ: ಭಾರತಕ್ಕೆ ಮರಳುವ ಮುನ್ನ ನಿಕಿತಾ ತನ್ನ ಹಣವನ್ನು ವಾಪಸ್ ಕೇಳಿದ್ದಳು. ಈ ವೇಳೆ ಗಲಾಟೆಯಾಗಿ ಅರ್ಜುನ್ ಆಕೆಯನ್ನು ಇರಿದು ಕೊಂದು, ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

* ಕೊನೆಯ ಕರೆ: ಡಿಸೆಂಬರ್ 31ರ ರಾತ್ರಿ ನಿಕಿತಾ ತಂದೆಗೆ ಕರೆ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ್ದರು. ಅದೇ ಆಕೆ ಮಾಡಿದ ಕೊನೆಯ ಕರೆ ಎನ್ನಲಾಗಿದೆ.

ಆರೋಪಿಯ ಕುತಂತ್ರ:

ವಿಶೇಷವೆಂದರೆ, ಹತ್ಯೆ ಮಾಡಿದ ಬಳಿಕ ಆರೋಪಿ ಅರ್ಜುನ್ ಶರ್ಮಾ ತಾನೇ ಪೊಲೀಸರಿಗೆ ದೂರು ನೀಡಿದ್ದ. "ಜನವರಿ 2ರಂದು ನಾನು ನಿಕಿತಾಳನ್ನು ಕೊನೆಯದಾಗಿ ನೋಡಿದ್ದೆ, ಆನಂತರ ಆಕೆ ಕಾಣೆಯಾಗಿದ್ದಾಳೆ" ಎಂದು ನಾಟಕವಾಡಿದ್ದ. ಆದರೆ ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಹೊರಬಂದಿದೆ.

ಸಾಲದ ಮೊತ್ತ ಎಷ್ಟು?

ನಿಕಿತಾಳ ಸೋದರಸಂಬಂಧಿ ಸರಸ್ವತಿ ಅವರು ಭಾರತೀಯ ರಾಯಭಾರ ಕಚೇರಿಗೆ ನೀಡಿರುವ ಮಾಹಿತಿ ಪ್ರಕಾರ, ಕೊಲೆಗೆ ಕೆಲವು ದಿನಗಳ ಮೊದಲು ಅರ್ಜುನ್ ಸುಮಾರು 4,500 ಡಾಲರ್ (ಅಂದಾಜು 4.07 ಲಕ್ಷ ರೂ.) ಸಾಲ ಪಡೆದಿದ್ದ ಎನ್ನಲಾಗಿದೆ.

ಕುಟುಂಬದ ಮನವಿ:

"ನನ್ನ ಮಗಳ ಶವವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಾಗಬೇಕು ಹಾಗೂ ಕೊಲೆಗಾರನಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಮೃತಳ ತಂದೆ ಕಣ್ಣೀರಿಡುತ್ತಾ ವಿನಂತಿಸಿದ್ದಾರೆ.