Skip to main content
ವಿಡಿಯೋ
politics

ʻನನ್ನ ಕಚೇರಿ ಕೆಡವಿದವರನ್ನು ಜನರೇ ಮನೆಗೆ ಕಳಿಸಿದ್ದಾರೆʼ: ಶಿವಸೇನೆ ವಿರುದ್ಧ ಕಂಗನಾ ರಣಾವತ್‌ ಆಕ್ರೋಶ

By Bhavana Gowda
ʻನನ್ನ ಕಚೇರಿ ಕೆಡವಿದವರನ್ನು ಜನರೇ ಮನೆಗೆ ಕಳಿಸಿದ್ದಾರೆʼ: ಶಿವಸೇನೆ ವಿರುದ್ಧ ಕಂಗನಾ ರಣಾವತ್‌ ಆಕ್ರೋಶ

"ನನ್ನ ಮನೆ ಕೆಡವಿದವರು ಮತ್ತು ನನಗೆ ಬೆದರಿಕೆ ಹಾಕಿದವರನ್ನು ಇಂದು ಮಹಾರಾಷ್ಟ್ರದ ಜನರೇ ಅಧಿಕಾರದಿಂದ ಕಿತ್ತೊಗೆದಿದ್ದಾರೆ" ಎಂದು ಸಂಸದೆ ಕಂಗನಾ ರಣಾವತ್ ಕಿಡಿಕಾರಿದ್ದಾರೆ.

ಮುಂಬೈ: "ನನ್ನ ಮನೆ ಕೆಡವಿದವರು ಮತ್ತು ನನಗೆ ಬೆದರಿಕೆ ಹಾಕಿದವರನ್ನು ಇಂದು ಮಹಾರಾಷ್ಟ್ರದ ಜನರೇ ಅಧಿಕಾರದಿಂದ ಕಿತ್ತೊಗೆದಿದ್ದಾರೆ" ಎಂದು ಸಂಸದೆ ಕಂಗನಾ ರಣಾವತ್ ಕಿಡಿಕಾರಿದ್ದಾರೆ. ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಭಾರಿ ಸೋಲು ಅನುಭವಿಸಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬಿಎಂಸಿಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಕಂಗನಾ, "ಇದು ಕೇವಲ ರಾಜಕೀಯ ಗೆಲುವಲ್ಲ, ನನಗಾದ ಅನ್ಯಾಯಕ್ಕೆ ಸಿಕ್ಕ ನ್ಯಾಯ" ಎಂದು ಬಣ್ಣಿಸಿದ್ದಾರೆ.

ಬಿಎಂಸಿ ಸೋತಿದ್ದಕ್ಕೆ ಕಂಗನಾ ಹರ್ಷ

2020ರಲ್ಲಿ ಕಂಗನಾ ಅವರ ಬಾಂದ್ರಾದಲ್ಲಿದ್ದ ಕಚೇರಿಯನ್ನು ಅಂದಿನ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಮತ್ತು ಬಿಎಂಸಿ ಅಧಿಕಾರಿಗಳು ಧ್ವಂಸಗೊಳಿಸಿದ್ದರು. ಇದನ್ನು ನಂತರ ಬಾಂಬೆ ಹೈಕೋರ್ಟ್ 'ಕಾನೂನು ಬಾಹಿರ' ಎಂದು ತೀರ್ಪಿತ್ತು. ಈಗ 25 ವರ್ಷಗಳ ನಂತರ ಬಿಎಂಸಿಯಲ್ಲಿ ಶಿವಸೇನೆ ಅಧಿಕಾರ ಕಳೆದುಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಕಂಗನಾ, "ಅಂದು ನನ್ನ ಮೇಲೆ ಮಹಿಳಾ ದ್ವೇಷ ತೋರಿದವರು ಮತ್ತು ಗೂಂಡಾಗಿರಿ ಮಾಡಿದವರಿಗೆ ಜನರೇ ಸರಿಯಾದ ಜಾಗ ತೋರಿಸಿದ್ದಾರೆ. ಸತ್ಯಕ್ಕೆ ಕೊನೆಗೂ ಜಯ ಸಿಕ್ಕಿದೆ" ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ 'ಮಹಾಯುತಿ' ಮೈತ್ರಿಕೂಟದ ಸುನಾಮಿ

ಮುಂಬೈ ಮಾತ್ರವಲ್ಲದೆ ಪುಣೆ, ಪಿಂಪ್ರಿ-ಚಿಂಚವಾಡ ಸೇರಿದಂತೆ ಇಡೀ ಮಹಾರಾಷ್ಟ್ರದಾದ್ಯಂತ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದೆ.

ಒಟ್ಟು ಸ್ಥಾನಗಳು: ರಾಜ್ಯದ ಒಟ್ಟು 2,869 ವಾರ್ಡ್‌ಗಳ ಪೈಕಿ ಮೈತ್ರಿಕೂಟ 1,843 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಬಿಎಂಸಿ ಫಲಿತಾಂಶ: ಒಟ್ಟು 227 ವಾರ್ಡ್‌ಗಳಲ್ಲಿ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಮೈತ್ರಿ 116 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ.

ಇತರ ಪಕ್ಷಗಳು: ಉದ್ಧವ್ ಠಾಕ್ರೆ ಬಣದ ಶಿವಸೇನೆ 73 ಸ್ಥಾನಗಳಿಗೆ ತೃಪ್ತಿಪಟ್ಟರೆ, ಕಾಂಗ್ರೆಸ್ 24 ಸ್ಥಾನಗಳನ್ನು ಗೆದ್ದಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳು ಈ ಚುನಾವಣೆಯಲ್ಲಿ ಮಂಕಾಗಿವೆ.

ಠಾಕ್ರೆ ಕುಟುಂಬದ 25 ವರ್ಷಗಳ ಹಿಡಿತಕ್ಕೆ ಬ್ರೇಕ್

ಕಳೆದ ಎರಡೂವರೆ ದಶಕಗಳಿಂದ ಬಿಎಂಸಿಯ ಮೇಲೆ ಠಾಕ್ರೆ ಕುಟುಂಬದ ಏಕಚಕ್ರಾಧಿಪತ್ಯವಿತ್ತು. ಈ ಚುನಾವಣಾ ಫಲಿತಾಂಶವು ಮುಂಬೈ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಬಿಜೆಪಿಯ ಈ ಗೆಲುವು ಠಾಕ್ರೆ ಕುಟುಂಬದ ರಾಜಕೀಯ ಭವಿಷ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.