Skip to main content
ವಿಡಿಯೋ
general

ರಾಷ್ಟ್ರಪತಿ ಭವನದ ಔತಣಕೂಟಕ್ಕೆ ಕನ್ನಡಿಗನಿಗೆ ಬುಲಾವ್: ಯುವ ಉದ್ಯಮಿ ಕೌಶಿಕ್ ಮುದ್ದಾಗೆ ಅಪರೂಪದ ಗೌರವ

By Bhavana Gowda
ರಾಷ್ಟ್ರಪತಿ ಭವನದ ಔತಣಕೂಟಕ್ಕೆ ಕನ್ನಡಿಗನಿಗೆ ಬುಲಾವ್: ಯುವ ಉದ್ಯಮಿ ಕೌಶಿಕ್ ಮುದ್ದಾಗೆ ಅಪರೂಪದ ಗೌರವ

ಕೌಶಿಕ್ ಅಭಿವೃದ್ಧಿಪಡಿಸಿದ 5D ಪ್ರಿಂಟರ್ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುವ ಪ್ರತಿಷ್ಠಿತ ಔತಣಕೂಟದಲ್ಲಿ ಭಾಗವಹಿಸಲು ಬೆಂಗಳೂರಿನ ಯುವ ಉದ್ಯಮಿ, 'ಎಥೆರಿಯಲ್ ಮಿಷನ್ಸ್' ಕಂಪನಿಯ ಸಹ-ಸಂಸ್ಥಾಪಕ ಕೌಶಿಕ್ ಮುದ್ದಾ ಅವರಿಗೆ ಆಹ್ವಾನ ಲಭಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಮಾಡಿರುವ ಅಸಾಧಾರಣ ಸಾಧನೆಯನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಗೌರವ ನೀಡಿದ್ದಾರೆ.

ಸಾಧನೆಯ ಶಿಖರ ಏರಿದ ಕೌಶಿಕ್:

ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಕೌಶಿಕ್, 2014ರಲ್ಲಿ ತಮ್ಮ ಸ್ನೇಹಿತ ನವೀನ್ ಜೈನ್ ಅವರೊಂದಿಗೆ ಸೇರಿ ಸ್ಟಾರ್ಟಪ್ ಆರಂಭಿಸಿದ್ದರು. ಇಂದು ಇವರ ಕಂಪನಿಯು ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.

5D ಪ್ರಿಂಟರ್ ಆವಿಷ್ಕಾರ: ಕೌಶಿಕ್ ಅಭಿವೃದ್ಧಿಪಡಿಸಿದ 5D ಪ್ರಿಂಟರ್ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೋವಿಡ್ ಕಾಲದ ನೆರವು: ಕರೋನಾ ಸಂಕಷ್ಟದ ಸಮಯದಲ್ಲಿ ಏಕಕಾಲಕ್ಕೆ ಇಬ್ಬರು ರೋಗಿಗಳಿಗೆ ಆಮ್ಲಜನಕ ಒದಗಿಸುವ 'ಟು-ವೇ ವೆಂಟಿಲೇಟರ್' ಅಭಿವೃದ್ಧಿಪಡಿಸಿ ಜನರ ಪ್ರಾಣ ಉಳಿಸಲು ಸಹಕರಿಸಿದ್ದರು.

ಹೈಟೆಕ್ ಉತ್ಪನ್ನಗಳು: ಇವರ ಕಂಪನಿಯು ಏರೋಸ್ಪೇಸ್, ರಕ್ಷಣೆ, ಆರೋಗ್ಯ ಮತ್ತು ಸೆಮಿಕಂಡಕ್ಟರ್ ವಲಯಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸಿಎನ್‌ಸಿ (CNC) ಯಂತ್ರಗಳನ್ನು ತಯಾರಿಸುತ್ತಿದೆ.

ಪ್ರಶಸ್ತಿಗಳ ಗರಿ:

ಸಿಇಎಸ್ (CES) ಬೆಸ್ಟ್ ಆಫ್ ಇನ್ನೋವೇಶನ್: ಜಾಗತಿಕ ಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿ ಕೌಶಿಕ್ ಅವರ ಮುಡಿಗೇರಿದೆ.

ಇನ್ನೋವೇಟರ್ಸ್ ಅಂಡರ್ 35: ಎಂಐಟಿ (MIT) ಟೆಕ್ನಾಲಜಿ ರಿವ್ಯೂ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ಉದ್ಯೋಗದಾತ: ಪೀಣ್ಯದಲ್ಲಿರುವ ಇವರ ಸಂಸ್ಥೆಯು ಇಂದು 500ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಮೂಲಕ ಯುವ ಉದ್ಯಮಿಗಳಿಗೆ ಮಾದರಿಯಾಗಿದೆ.

ಹಿನ್ನೆಲೆ:

ಕೌಶಿಕ್ ಅವರು ಕಲಬುರಗಿ ಮೂಲದ ಕೇದಾರನಾಥ ಮುದ್ದಾ ಅವರ ಪುತ್ರ. ಇವರ ತಂದೆಯವರು ಈ ಹಿಂದೆ ಮುಖ್ಯಮಂತ್ರಿಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ಕೌಶಿಕ್ ಅವರು ತಂದೆಯಿಂದ ಬಂಡವಾಳ ಪಡೆಯದೆ, ಸ್ವಂತ ಉಳಿತಾಯದ ಹಣದಿಂದಲೇ ಉದ್ಯಮ ಕಟ್ಟಿ ಬೆಳೆಸಿದ್ದಾರೆ.

"ರಾಷ್ಟ್ರಪತಿಗಳಿಂದ ಈ ಆಹ್ವಾನ ಬಂದಿರುವುದು ಅತ್ಯಂತ ಸಂತಸ ತಂದಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಹೊಸ ಆವಿಷ್ಕಾರಗಳನ್ನು ಮಾಡಲು ನನಗೆ ಸ್ಪೂರ್ತಿ ನೀಡಲಿದೆ." - ಕೌಶಿಕ್ ಮುದ್ದಾ.