Skip to main content
ವಿಡಿಯೋ
general

ಖಾಸಗಿ ಸ್ಲೀಪರ್ ಬಸ್‌ಗಳಿಗೆ ಹೊಸ ಗೈಡ್‌ಲೈನ್ಸ್: ಸಾರಿಗೆ ಸಚಿವರಿಂದ 8 ಕಡ್ಡಾಯ ನಿಯಮಗಳ ಜಾರಿ

By Bhavana Gowda
ಖಾಸಗಿ ಸ್ಲೀಪರ್ ಬಸ್‌ಗಳಿಗೆ ಹೊಸ ಗೈಡ್‌ಲೈನ್ಸ್: ಸಾರಿಗೆ ಸಚಿವರಿಂದ 8 ಕಡ್ಡಾಯ ನಿಯಮಗಳ ಜಾರಿ

ಸ್ಲೀಪರ್ ಬಸ್‌ಗಳಲ್ಲಿ ಚಾಲಕನ ಸೀಟಿನ ಹಿಂಭಾಗದಲ್ಲಿರುವ ಹೆಚ್ಚುವರಿ ಡೋರ್‌ಗಳನ್ನು ತೆಗೆದುಹಾಕಬೇಕು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಹಾಗೂ ಇತ್ತೀಚಿನ ಅಗ್ನಿ ಅವಘಡಗಳ ಬೆನ್ನಲ್ಲೇ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರು ಮತ್ತು ಬಸ್ ಬಾಡಿ ಬಿಲ್ಡರ್‌ಗಳೊಂದಿಗೆ ತುರ್ತು ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಯಾಣಿಕರ ಪ್ರಾಣ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, 8 ಪ್ರಮುಖ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

ಸ್ಲೀಪರ್ ಬಸ್‌ಗಳಿಗೆ ಕಡ್ಡಾಯವಾಗಿರುವ 8 ನಿಯಮಗಳು:

ಚಾಲಕನ ಹಿಂಬದಿ ಬಾಗಿಲು: ಸ್ಲೀಪರ್ ಬಸ್‌ಗಳಲ್ಲಿ ಚಾಲಕನ ಸೀಟಿನ ಹಿಂಭಾಗದಲ್ಲಿರುವ ಹೆಚ್ಚುವರಿ ಡೋರ್‌ಗಳನ್ನು ತೆಗೆದುಹಾಕಬೇಕು. ಸ್ಲೀಪರ್ ಬರ್ತ್‌ಗಳಲ್ಲಿ ಅಳವಡಿಸಲಾಗಿರುವ ಸ್ಲೈಡರ್‌ಗಳನ್ನು (ತಡೆಗೋಡೆ/ಪರದೆ ಮಾದರಿ) ತೆಗೆಯಬೇಕು.

ಫೈರ್ ಡಿಟೆಕ್ಷನ್ ಸಿಸ್ಟಮ್: ಬೆಂಕಿ ಕಾಣಿಸಿಕೊಂಡರೆ ಪತ್ತೆಹಚ್ಚುವ 'ಫೈರ್ ಡಿಟೆಕ್ಷನ್' ವ್ಯವಸ್ಥೆಯನ್ನು ಒಂದು ತಿಂಗಳೊಳಗೆ ಅಳವಡಿಸಬೇಕು.

ಅಗ್ನಿಶಾಮಕ ಸಾಧನ: ಪ್ರತಿ ಬಸ್ಸಿನಲ್ಲಿ ಕನಿಷ್ಠ 10 ಕೆಜಿ ತೂಕದ ಅಗ್ನಿಶಾಮಕ ಸಾಧನ ಇರುವುದು ಕಡ್ಡಾಯ.

ಚಾಸಿಸ್ ವಿಸ್ತರಣೆಗೆ ನಿಷೇಧ: ಬಸ್ಸಿನ ಚಾಸಿಸ್ ಅನ್ನು ಅನಧಿಕೃತವಾಗಿ ವಿಸ್ತರಣೆ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.

ಅಧಿಕೃತ ಪ್ರಮಾಣಪತ್ರ: ಅನುಮೋದಿತ ಟೆಸ್ಟಿಂಗ್ ಏಜೆನ್ಸಿಗಳಿಂದ ಸುರಕ್ಷತಾ ಪ್ರಮಾಣಪತ್ರ ಪಡೆಯುವುದು ಕಡ್ಡಾಯ.

ಕಟ್ಟುನಿಟ್ಟಿನ ಎಫ್‌ಸಿ (FC): ಪ್ರಯಾಣಿಕರ ಸುರಕ್ಷತಾ ಮಾನದಂಡಗಳು ಪೂರ್ಣ ಪ್ರಮಾಣದಲ್ಲಿದ್ದರೆ ಮಾತ್ರ ವಾಹನ ಅರ್ಹತಾ ಪತ್ರ (Fitness Certificate) ನೀಡಲಾಗುವುದು.

ನೋಂದಣಿ ಪೂರ್ವ ಪರಿಶೀಲನೆ: ಬಸ್ ಕವಚ (Body) ನಿರ್ಮಾಣ ಸಂಸ್ಥೆಯ ಸಿಂಧುತ್ವವನ್ನು ಪರಿಶೀಲಿಸಿದ ನಂತರವೇ ನೋಂದಣಿ ಪ್ರಕ್ರಿಯೆ ನಡೆಸಬೇಕು.

ಪ್ರಯಾಣಿಕರ ಸುರಕ್ಷತೆಗಾಗಿ ಇತರ ಸೂಚನೆಗಳು:

ತುರ್ತು ನಿರ್ಗಮನ (Emergency Exit): ಎಮರ್ಜೆನ್ಸಿ ಡೋರ್‌ಗಳ ಬಳಿ ಶಕ್ತಿಯುತವಾಗಿರುವ ಯುವಕರು ಅಥವಾ ಮಧ್ಯವಯಸ್ಕರಿಗೆ ಸೀಟು ಹಂಚಿಕೆ ಮಾಡಬೇಕು, ಇದರಿಂದ ತುರ್ತು ಸಂದರ್ಭದಲ್ಲಿ ಇತರರಿಗೆ ಸಹಾಯವಾಗುತ್ತದೆ.

ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್‌ಗಳನ್ನು ಇಡಬೇಕು ಹಾಗೂ ತುರ್ತು ಬಾಗಿಲಿನಿಂದ ಕೆಳಗೆ ಇಳಿಯಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ ಇರಬೇಕು. ಬೆಂಕಿ ಕಾಣಿಸಿಕೊಂಡಾಗ ಚಾಲಕರು ತಕ್ಷಣವೇ ಪ್ರಯಾಣಿಕರಿಗೆ ಅಲರಾಂ ಮೂಲಕ ಎಚ್ಚರಿಕೆ ನೀಡಬೇಕು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.

ಈ ನಿಯಮಗಳನ್ನು ಪಾಲಿಸದ ಖಾಸಗಿ ಬಸ್ ಮಾಲೀಕರು ಮತ್ತು ಬಾಡಿ ಬಿಲ್ಡಿಂಗ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.