ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದ ಕಾನ್ಫಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಐಟಿ ಅಧಿಕಾರಿಗಳ ದಾಳಿಯಿಂದ ಅವರು ಕಂಗೆಟ್ಟಿದ್ದರು ಎನ್ನಲಾಗುತ್ತಿರುವ ಬೆನ್ನಲ್ಲೇ, ಅವರ ಸಾವಿನ ಕೊನೆಯ ಕ್ಷಣಗಳ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕ ಟಿಜೆ ಜೋಸೆಫ್ ಅವರು ಪೊಲೀಸರಿಗೆ ದೂರು ನೀಡಿದ್ದು, ಸಾವಿನ ಸುತ್ತಲಿನ ನಿಗೂಢ ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಲಿಫ್ಟ್ ಬಿಟ್ಟು ಮೆಟ್ಟಿಲು ಹತ್ತಿ ಬಂದಿದ್ದ ರಾಯ್!
ಸಾಮಾನ್ಯವಾಗಿ ಅತೀ ಹೆಚ್ಚು ತಾಳ್ಮೆ ಮತ್ತು ಸದಾ ಹಸನ್ಮುಖಿಯಾಗಿದ್ದ ಸಿಜೆ ರಾಯ್, ಸವಾಲುಗಳನ್ನು ಕಂಡು ಎಂದೂ ಕುಗ್ಗಿದವರಲ್ಲ. ಆದರೆ, ಜನವರಿ 30ರ ಮಧ್ಯಾಹ್ನ ಲ್ಯಾಂಗ್‌ಫೋರ್ಡ್ ರಸ್ತೆಯ ಕಚೇರಿಗೆ ಬಂದಾಗ ಅವರ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಕಾರಿನಿಂದ ಇಳಿದ ರಾಯ್, ಎಂದಿನಂತೆ ಲಿಫ್ಟ್ ಬಳಸುವ ಬದಲು ಓಡುತ್ತಾ ಮೆಟ್ಟಿಲುಗಳ ಮೂಲಕವೇ ಮೇಲೆ ಬಂದಿದ್ದು ಸಿಬ್ಬಂದಿಗಳಲ್ಲಿ ಆಶ್ಚರ್ಯ ಮೂಡಿಸಿತ್ತು.
ಗನ್ ಮ್ಯಾನ್‌ಗೆ ಹೊರಗಿರಲು ಸೂಚನೆ
ಯಾವಾಗಲೂ ರಾಯ್ ಜೊತೆಗೇ ಇರುತ್ತಿದ್ದ ಗನ್ ಮ್ಯಾನ್‌ಗೆ ಅಂದು ಅನಿರೀಕ್ಷಿತ ಆದೇಶ ಸಿಕ್ಕಿತ್ತು. "ನೀನು ಹೊರಗಡೆಯೇ ಇರು, ಯಾರನ್ನೂ ಒಳಗೆ ಬಿಡಬೇಡ" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ರಾಯ್, ಒಂಟಿಯಾಗಿ ತಮ್ಮ ಚೇಂಬರ್ ಪ್ರವೇಶಿಸಿದರು. ಇದು ಅವರ ಕಚೇರಿ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ವಿಲಕ್ಷಣ ನಡವಳಿಕೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
15 ನಿಮಿಷದ ಮೌನ.. ಆಮೇಲೆ ಕೇಳಿಸಿತು ಗುಂಡಿನ ಸದ್ದ!
ಕೊಠಡಿಯೊಳಗೆ ಹೋದ ರಾಯ್ ಬಾಗಿಲನ್ನು ಲಾಕ್ ಮಾಡಿಕೊಂಡರು. ಸುಮಾರು 15 ನಿಮಿಷಗಳ ಕಾಲ ಒಳಗಿನಿಂದ ಯಾವುದೇ ಶಬ್ದ ಬರಲಿಲ್ಲ. ಏಕಾಂತದಲ್ಲಿ ಇರುವುದು ಅಥವಾ ಬಾಗಿಲು ಹಾಕಿಕೊಳ್ಳುವ ಅಭ್ಯಾಸ ರಾಯ್‌ಗೆ ಇರಲಿಲ್ಲ. ಆದರೆ, ಹದಿನೈದನೇ ನಿಮಿಷಕ್ಕೆ ದಿಢೀರನೆ ಗುಂಡು ಹಾರಿದ ಶಬ್ದ ಕೇಳಿಸಿತು. ತಕ್ಷಣ ಸಿಬ್ಬಂದಿ ಬಾಗಿಲು ಮುರಿದು ಒಳಹೋದಾಗ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು
ನಿರ್ದೇಶಕರ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ (SOCO) ತಂಡ ಭೇಟಿ ನೀಡಿ ಪರೀಕ್ಷೆ ನಡೆಸಿದೆ:
ಸಾಕ್ಷ್ಯ ಸಂಗ್ರಹ: ಚೇಂಬರ್‌ನಲ್ಲಿದ್ದ ರಕ್ತದ ಕಲೆಗಳು ಮತ್ತು ಪಿಸ್ತೂಲ್ ಮೇಲಿನ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದೆ.
ವಶಕ್ಕೆ: ಮೃತರ ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಲಾದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಐಟಿ ದಾಳಿಯ ಒತ್ತಡ ಅಥವಾ ಬೇರೆನಾದರೂ ಕಾರಣಗಳಿವೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.