ಕೋಲ್ಕತ್ತಾ: ಪಶ್ಚಿಮ ಬಂಗಾಳವು ಮುಂಬರುವ ವಿಧಾನಸಭಾ ಚುನಾವಣೆಯ ಕಾವು ಪಡೆದುಕೊಳ್ಳುತ್ತಿದೆ. 2011 ರಿಂದ ಸತತವಾಗಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಗೆ ಈ ಬಾರಿ ಸವಾಲುಗಳು ಹೆಚ್ಚಿವೆ. 34 ವರ್ಷಗಳ ಎಡರಂಗದ ಆಡಳಿತಕ್ಕೆ ಮುಕ್ತಿ ಹಾಡಿದ್ದ 'ದೀದಿ'ಗೆ 15 ವರ್ಷಗಳ ಆಡಳಿತದ ನಂತರ ಕೆಲವು ಪ್ರಮುಖ ಅಂಶಗಳು ಹಿನ್ನಡೆ ತರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಬೀಂದ್ರ ಭಾರತಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕುನಾಲ್ ದೆಬನಾಥ್ ಅವರ ವಿಶ್ಲೇಷಣೆಯ ಆಧಾರದ ಮೇಲೆ ಟಿಎಂಸಿ ಎದುರಿಸುತ್ತಿರುವ ಸವಾಲುಗಳು ಇಲ್ಲಿವೆ:
1. ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರದ ಆರೋಪ
ಸುಮಾರು 15 ವರ್ಷಗಳ ಸುದೀರ್ಘ ಆಡಳಿತದ ನಂತರ ಸಹಜವಾಗಿಯೇ 'ಆಡಳಿತ ವಿರೋಧಿ ಅಲೆ' (Anti-incumbency) ಸೃಷ್ಟಿಯಾಗಿದೆ. ಇದರ ಜೊತೆಗೆ ಟಿಎಂಸಿಯ ಉನ್ನತ ನಾಯಕರು ಮತ್ತು ಸಚಿವರ ಮೇಲಿರುವ ಭ್ರಷ್ಟಾಚಾರದ ಗಂಭೀರ ಆರೋಪಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿವೆ. ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ನಡೆಸುತ್ತಿರುವ ತನಿಖೆಗಳು ಚುನಾವಣಾ ಕಣದಲ್ಲಿ ಪ್ರಮುಖ ಚರ್ಚಾ ವಿಷಯವಾಗಲಿವೆ.
2. ಮೂಲಭೂತ ಮತ್ತು ಆರ್ಥಿಕ ಸವಾಲುಗಳು
ಕೇವಲ ಭ್ರಷ್ಟಾಚಾರ ಮಾತ್ರವಲ್ಲದೆ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ಮೂಲಭೂತ ಸಮಸ್ಯೆಗಳು ಟಿಎಂಸಿಗೆ ತಲೆನೋವಾಗಬಹುದು:
ನಿರುದ್ಯೋಗ: ಯುವಜನರಲ್ಲಿ ಉದ್ಯೋಗದ ಕೊರತೆ ದೊಡ್ಡ ಮಟ್ಟದ ಅಸಮಾಧಾನ ಮೂಡಿಸಿದೆ.
ಕೈಗಾರಿಕೀಕರಣದ ಕೊರತೆ: ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಕುಂಠಿತಗೊಂಡಿದೆ.
ನೇಮಕಾತಿ ಹಗರಣ: ಸರ್ಕಾರಿ ಸಂಸ್ಥೆಗಳಲ್ಲಿನ ಅಕ್ರಮ ಅಥವಾ ಸ್ಥಗಿತಗೊಂಡಿರುವ ನೇಮಕಾತಿ ಪ್ರಕ್ರಿಯೆಗಳು ಅಭ್ಯರ್ಥಿಗಳಲ್ಲಿ ಆಕ್ರೋಶ ಮೂಡಿಸಿವೆ.
3. ನಗರ ಮತ್ತು ಗ್ರಾಮೀಣ ಮತಗಳ ಲೆಕ್ಕಾಚಾರ
ಬಂಗಾಳದ 294 ಕ್ಷೇತ್ರಗಳಲ್ಲಿ ಸರಿಸುಮಾರು:
32% ನಗರ ಪ್ರದೇಶಗಳು
20% ಅರೆ-ನಗರ ಪ್ರದೇಶಗಳು
48% ಗ್ರಾಮೀಣ ಪ್ರದೇಶಗಳು
2021ರಲ್ಲಿ ಟಿಎಂಸಿ ನಗರ ಮತ್ತು ಗ್ರಾಮೀಣ ಎರಡೂ ಭಾಗಗಳಲ್ಲಿ ಉತ್ತಮ ಸಾಧನೆ ಮಾಡಿತ್ತು. ಆದರೆ ಈ ಬಾರಿ ನಗರ ಪ್ರದೇಶದ ಮತದಾರರು ಮೂಲಭೂತ ಸೌಕರ್ಯ ಮತ್ತು ಭ್ರಷ್ಟಾಚಾರದ ವಿಚಾರದಲ್ಲಿ ಟಿಎಂಸಿಯಿಂದ ದೂರ ಸರಿಯುವ ಆತಂಕವಿದೆ.
4. ರಾಷ್ಟ್ರೀಯ ರಾಜಕೀಯ ಮತ್ತು 'ಹೊರಗಿನವರು' ಎಂಬ ಅಸ್ತ್ರ
ಟಿಎಂಸಿ ಮತ್ತು ಎಡಪಕ್ಷಗಳು ಬಿಜೆಪಿಯ 'ಹಿಂದಿ-ಹಿಂದೂ-ಹಿಂದೂಸ್ತಾನ್' ಎಂಬ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬಂಗಾಳದ ಸಂಸ್ಕೃತಿಗೆ ವಿರುದ್ಧವಾದುದು ಮತ್ತು 'ಹೊರಗಿನವರ ಸಂಸ್ಕೃತಿ' ಎಂದು ಬಿಂಬಿಸುತ್ತಿವೆ.
ಅಲ್ಪಸಂಖ್ಯಾತರ ಮತ ಕ್ರೋಢೀಕರಣ: CAA, NRC ಮತ್ತು ರಾಮಮಂದಿರದಂತಹ ರಾಷ್ಟ್ರೀಯ ವಿಚಾರಗಳನ್ನು ಬಳಸಿ, ತಾವು ಮಾತ್ರ ಅಲ್ಪಸಂಖ್ಯಾತರ ರಕ್ಷಕರು ಎಂದು ಟಿಎಂಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಕೇಂದ್ರ-ರಾಜ್ಯ ಸಂಘರ್ಷ: MGNREGA ಅನುದಾನ ತಡೆ ಹಿಡಿದಿರುವುದು ಮತ್ತು ಚುನಾವಣಾ ಆಯೋಗದ ವಿಚಾರದಲ್ಲಿ ಕೇಂದ್ರದ ಹಸ್ತಕ್ಷೇಪದ ಆರೋಪಗಳನ್ನು ಮಮತಾ ಬ್ಯಾನರ್ಜಿ ಚುನಾವಣಾ ಅಸ್ತ್ರವಾಗಿ ಬಳಸುತ್ತಿದ್ದಾರೆ.
5. ಯುವ ಮತದಾರರು ಮತ್ತು 'ಜೆನ್-ಜೆಡ್' (Gen-Z)
2026ರ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುವವರು ಸೇರಿದಂತೆ ಯುವ ಮತದಾರರು ಒಟ್ಟು ಮತದಾರರ 20% ರಿಂದ 25% ಭಾಗವಾಗಿದ್ದಾರೆ. ಇವರು ಡಿಜಿಟಲ್ ಸಂಪರ್ಕ ಹೊಂದಿದ್ದು, ಆರ್ಥಿಕ ಅವಕಾಶಗಳ ಬಗ್ಗೆ ಹೆಚ್ಚಿನ ಸಂವೇದನೆ ಹೊಂದಿದ್ದಾರೆ. ಅನೇಕ ಯುವಕರು ಸರ್ಕಾರದ ಸೌಲಭ್ಯಗಳ ಫಲಾನುಭವಿಗಳಾಗಿದ್ದರೂ, ದೀರ್ಘಕಾಲೀನ ಉದ್ಯೋಗದ ಕೊರತೆಯು ಅವರ ಮತದಾನದ ಹಾದಿಯನ್ನು ಬದಲಿಸಬಹುದು. ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಪ್ರಬಲ ವ್ಯಕ್ತಿತ್ವ ಹೊಂದಿದ್ದರೂ, ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ ಮತ್ತು ಬದಲಾಗುತ್ತಿರುವ ಯುವ ಮತದಾರರ ಮನಸ್ಥಿತಿಯು 2026ರ ಚುನಾವಣೆಯನ್ನು ಟಿಎಂಸಿಗೆ ಕಠಿಣ ಪರೀಕ್ಷೆಯನ್ನಾಗಿ ಮಾಡಲಿದೆ.