ಬೆಂಗಳೂರು: ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ವಿರುದ್ಧ ಪೊಲೀಸರು ಯಾಂತ್ರಿಕವಾಗಿ ಎಫ್‌ಐಆರ್ (FIR) ದಾಖಲಿಸುವಂತಿಲ್ಲ. ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಆಧರಿಸಿ, ಕರ್ನಾಟಕ ಸರ್ಕಾರವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಕುರಿತಾದ ದೂರುಗಳನ್ನು ನಿರ್ವಹಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಪ್ರಾಥಮಿಕ ವಿಚಾರಣೆ ನಡೆಸದೆ ಪ್ರಕರಣಗಳನ್ನು ದಾಖಲಿಸುತ್ತಿರುವುದಕ್ಕೆ ಬ್ರೇಕ್ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿವೆ:
1. ಯಾರು ಬೇಕಾದರೂ ದೂರು ನೀಡುವಂತಿಲ್ಲ (ಸ್ಥಳದ ದೃಢೀಕರಣ):
ಯಾವುದೇ ಪೋಸ್ಟ್‌ನಿಂದ ಮಾನಹಾನಿಯಾಗಿದೆ ಎಂದು ದೂರು ನೀಡುವ ವ್ಯಕ್ತಿ ಸ್ವತಃ "ನೊಂದ ವ್ಯಕ್ತಿ" ಆಗಿರಬೇಕು. ಮೂರನೇ ವ್ಯಕ್ತಿಗಳು ನೀಡುವ ದೂರುಗಳನ್ನು ಪೊಲೀಸರು ನೇರವಾಗಿ ಸ್ವೀಕರಿಸುವಂತಿಲ್ಲ.
2. ಪ್ರಾಥಮಿಕ ವಿಚಾರಣೆ ಕಡ್ಡಾಯ:
ದೂರು ಬಂದ ಕೂಡಲೇ ಎಫ್‌ಐಆರ್ ಹಾಕುವಂತಿಲ್ಲ. ಮೊದಲು ಪ್ರಾಥಮಿಕ ವಿಚಾರಣೆ ನಡೆಸಿ, ಅಲ್ಲಿ ಅಪರಾಧ ನಡೆದಿದೆ ಎಂಬ ಶಾಸನಬದ್ಧ ಅಂಶಗಳು ಕಂಡುಬಂದರೆ ಮಾತ್ರ ಕೇಸ್ ದಾಖಲಿಸಬೇಕು.
3. ದ್ವೇಷದ ಭಾಷಣದ ಬಗ್ಗೆ ಎಚ್ಚರಿಕೆ:
ಹಿಂಸೆ, ದ್ವೇಷ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವಂತಿದ್ದರೆ ಮಾತ್ರ ದ್ವೇಷದ ಪ್ರಚಾರ ಅಥವಾ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕು. ಸುಪ್ರೀಂ ಕೋರ್ಟ್‌ನ 'ಶ್ರೇಯಾ ಸಿಂಘಾಲ್' ಪ್ರಕರಣದ ತತ್ವಗಳನ್ನು ಇಲ್ಲಿ ಪಾಲಿಸುವುದು ಕಡ್ಡಾಯ.
4. ರಾಜಕೀಯ ಪೋಸ್ಟ್‌ಗಳಿಗೆ ರಕ್ಷಣೆ:
ರಾಜಕೀಯ ವಿಮರ್ಶೆ, ಕಟುವಾದ ಟೀಕೆ ಅಥವಾ ಆಕ್ರಮಣಕಾರಿ ಪೋಸ್ಟ್‌ಗಳ ವಿರುದ್ಧ ಯಾಂತ್ರಿಕವಾಗಿ ಕ್ರಮ ಕೈಗೊಳ್ಳಬಾರದು. ಸಂವಿಧಾನದ 19(1)(a) ಅಡಿಯಲ್ಲಿ ಇರುವ ಮುಕ್ತ ರಾಜಕೀಯ ಟೀಕೆಯ ಹಕ್ಕನ್ನು ಗೌರವಿಸಬೇಕು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಾಗ ಮಾತ್ರ ಕ್ರಮಕ್ಕೆ ಅವಕಾಶವಿದೆ.
5. ಮಾನನಷ್ಟ ಪ್ರಕರಣದಲ್ಲಿ ಪೊಲೀಸ್ ಹಸ್ತಕ್ಷೇಪವಿಲ್ಲ:
ಮಾನನಷ್ಟವು 'ಗುರುತಿಸಲಾಗದ ಅಪರಾಧ' (Non-Cognizable Offense) ಆಗಿರುವುದರಿಂದ, ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರುದಾರರನ್ನು ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಬೇಕು. ಮ್ಯಾಜಿಸ್ಟ್ರೇಟ್ ಆದೇಶವಿದ್ದರೆ ಮಾತ್ರ ಪೊಲೀಸರು ತನಿಖೆ ನಡೆಸಬಹುದು.
6. ಬಂಧನದ ಮೇಲೆ ನಿರ್ಬಂಧ:
'ಅರ್ನೇಶ್ ಕುಮಾರ್' ಪ್ರಕರಣದ ಮಾರ್ಗಸೂಚಿಗಳಂತೆ, ಸೋಶಿಯಲ್ ಮೀಡಿಯಾ ಪ್ರಕರಣಗಳಲ್ಲಿ ಯಾಂತ್ರಿಕವಾಗಿ ಬಂಧನ ಮಾಡುವಂತಿಲ್ಲ. ಬಂಧನಕ್ಕೆ ಬಲವಾದ ಕಾರಣಗಳು ಇರಲೇಬೇಕು.
7. ಕಾನೂನು ತಜ್ಞರ ಸಲಹೆ ಅಗತ್ಯ:
ಸೂಕ್ಷ್ಮ ರಾಜಕೀಯ ಪೋಸ್ಟ್‌ಗಳ ಬಗ್ಗೆ ಕೇಸ್ ದಾಖಲಿಸುವ ಮುನ್ನ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಂದ ಕಾನೂನು ಸಲಹೆ (Legal Opinion) ಪಡೆಯುವುದು ಕಡ್ಡಾಯಗೊಳಿಸಲಾಗಿದೆ.
8. ಕ್ಷುಲ್ಲಕ ದೂರುಗಳ ವಜಾ:
ರಾಜಕೀಯ ಪ್ರೇರಿತ ಅಥವಾ ಕ್ಷುಲ್ಲಕ ದೂರುಗಳೆಂದು ಕಂಡುಬಂದಲ್ಲಿ, ಬಿಎನ್‌ಎಸ್‌ಎಸ್ (BNSS) ಸೆಕ್ಷನ್ 176(1) ರ ಅಡಿಯಲ್ಲಿ ಪ್ರಕರಣವನ್ನು ಅಲ್ಲಿಗೇ ಕೈಬಿಡಲು ಪೊಲೀಸರಿಗೆ ಸೂಚಿಸಲಾಗಿದೆ.