Skip to main content
general

ನಾಳೆ ರಕ್ತ ಚಂದ್ರಗ್ರಹಣ: ದರ್ಶನ ಸಮಯದಲ್ಲಿ ಬದಲಾವಣೆ; ರಾಜ್ಯದ ಪ್ರಮುಖ ದೇಗುಲಗಳ ಹೊಸ ವೇಳಾಪಟ್ಟಿ ಹೀಗಿದೆ

By Bhavana Gowda
ನಾಳೆ ರಕ್ತ ಚಂದ್ರಗ್ರಹಣ: ದರ್ಶನ ಸಮಯದಲ್ಲಿ ಬದಲಾವಣೆ; ರಾಜ್ಯದ ಪ್ರಮುಖ ದೇಗುಲಗಳ ಹೊಸ ವೇಳಾಪಟ್ಟಿ ಹೀಗಿದೆ

ಯುಗಾದಿ ಹಬ್ಬದ ಸಂಭ್ರಮಕ್ಕೂ ಮುನ್ನವೇ ಅಂದರೆ ಮಾರ್ಚ್ 3ರ ಮಂಗಳವಾರದಂದು ಅಪರೂಪದ ‘ಕೇತುಗ್ರಸ್ತ ರಕ್ತ ಚಂದ್ರಗ್ರಹಣ’ (Blood Moon) ಸಂಭವಿಸಲಿದೆ.

ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮಕ್ಕೂ ಮುನ್ನವೇ ಅಂದರೆ ಮಾರ್ಚ್ 3ರ ಮಂಗಳವಾರದಂದು ಅಪರೂಪದ ‘ಕೇತುಗ್ರಸ್ತ ರಕ್ತ ಚಂದ್ರಗ್ರಹಣ’ (Blood Moon) ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ ಆರಂಭವಾಗಿ ಸಂಜೆ ಮುಕ್ತಾಯಗೊಳ್ಳಲಿದ್ದು, ಈ ಅವಧಿಯಲ್ಲಿ ರಾಜ್ಯದ ಬಹುತೇಕ ಪುಣ್ಯಕ್ಷೇತ್ರಗಳ ಬಾಗಿಲು ಮುಚ್ಚಲಿವೆ.

ಗ್ರಹಣದ ಸಮಯ:

ಗ್ರಹಣ ಆರಂಭ: ಮಧ್ಯಾಹ್ನ 3:10ಕ್ಕೆ

ಗ್ರಹಣ ಅಂತ್ಯ (ಮೋಕ್ಷ ಕಾಲ): ಸಂಜೆ 6:47ಕ್ಕೆ

ಬೆಂಗಳೂರಿನ ಪ್ರಮುಖ ದೇವಾಲಯಗಳ ಮಾಹಿತಿ:

ರಾಜಧಾನಿಯ ಪ್ರಮುಖ ದೇಗುಲಗಳಲ್ಲಿ ಗ್ರಹಣದ ನಂತರವಷ್ಟೇ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ:

ಗವಿ ಗಂಗಾಧರೇಶ್ವರ ದೇವಾಲಯ: ಬೆಳಿಗ್ಗೆ 9:00 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಸಂಜೆ 7:45ರ ನಂತರವಷ್ಟೇ ದರ್ಶನಕ್ಕೆ ಅವಕಾಶ. ಮಾರ್ಚ್ 4ರಂದು ವಿಶೇಷ 'ಗ್ರಹಣ ಶಾಂತಿ ಹೋಮ' ನಡೆಯಲಿದೆ.

ಬನಶಂಕರಿ ದೇವಾಲಯ: ಗ್ರಹಣ ಕಾಲದಲ್ಲಿ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7:00 ಗಂಟೆಯ ನಂತರ ನಿತ್ಯ ಪೂಜೆಗಳು ಪುನಾರಂಭಗೊಳ್ಳಲಿವೆ.

ಕಾಡುಮಲ್ಲೇಶ್ವರ ದೇವಾಲಯ: ಬೆಳಿಗ್ಗೆ 11:00 ಗಂಟೆಗೆ ಬಾಗಿಲು ಮುಚ್ಚಲಿದ್ದು, ರಾತ್ರಿ 7:30ಕ್ಕೆ ಪುನಃ ತೆರೆಯಲಾಗುವುದು.

ದೊಡ್ಡ ಗಣಪತಿ ದೇವಾಲಯ: ಗ್ರಹಣ ಮೋಕ್ಷದ ನಂತರ ಅಂದರೆ ರಾತ್ರಿ 7:45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಿದೆ.

ಬಂಡೆ ಮಹಾಕಾಳಿ ದೇವಾಲಯ (ವಿಶೇಷ): ಇಲ್ಲಿ ಗ್ರಹಣದ ಅವಧಿಯಲ್ಲೂ ದೇವಾಲಯ ತೆರೆದಿರುತ್ತದೆ. ದೇವಿಗೆ ತುಪ್ಪದ ಲೇಪನ ಮಾಡಿ ವಿಶೇಷ ಹೋಮ ನಡೆಸಲಾಗುವುದು. ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶವಿದೆ.

ರಾಜ್ಯದ ಇತರ ಪ್ರಮುಖ ಕ್ಷೇತ್ರಗಳ ವಿವರ:

1. ಶ್ರೀ ಕ್ಷೇತ್ರ ಧರ್ಮಸ್ಥಳ:

ದಕ್ಷಿಣ ಕನ್ನಡದ ಪ್ರಸಿದ್ಧ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ದರ್ಶನ ಸಮಯದಲ್ಲಿ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ:

ಬೆಳಿಗ್ಗೆ: 6:30 ರಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ದರ್ಶನ.

ಮಧ್ಯಾಹ್ನ: 1:30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತ.

ರಾತ್ರಿ: 7:30 ಗಂಟೆಯ ನಂತರ ಎಂದಿನಂತೆ ದರ್ಶನ ಲಭ್ಯ.

2. ಚಾಮುಂಡೇಶ್ವರಿ ದೇವಾಲಯ, ಮೈಸೂರು:

ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 8:30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣ ಮುಕ್ತಾಯದ ನಂತರ ಗರ್ಭಗುಡಿ ಶುದ್ಧೀಕರಣ ಕಾರ್ಯಗಳು ನಡೆಯಲಿವೆ.

ಭಕ್ತರಿಗೆ ಸೂಚನೆ:

ದೂರದ ಊರುಗಳಿಂದ ಬರುವ ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸವನ್ನು ಯೋಜಿಸಬೇಕು. ಗ್ರಹಣ ಮುಕ್ತಾಯದ ನಂತರ ಸಂಪ್ರದಾಯದಂತೆ ದೇವಾಲಯಗಳನ್ನು ಶುದ್ಧೀಕರಿಸಿ, ಪೂಜೆ ಸಲ್ಲಿಸಿದ ಬಳಿಕವಷ್ಟೇ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತದೆ.