ಅಲ್ಲೋಲಕಲ್ಲೋಲವಾಗಿರುವ ಮಧ್ಯಪ್ರಾಚ್ಯ ಮತ್ತು ಅಮೆರಿಕದ ಮಾನವೀಯತೆಯಿಲ್ಲದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ಶಾಲೆಗಳು ಮತ್ತು ನಾಗರಿಕರ ಮೇಲೆ ನಡೆಯುತ್ತಿವೆ. ಟೆಹ್ರಾನ್‌ನ ಉಪಗ್ರಹ ಚಿತ್ರಗಳು ಅತ್ಯಂತ ಭಯಾನಕ ಯುದ್ಧದ ದೃಶ್ಯಗಳನ್ನು ತೋರಿಸುತ್ತಿದ್ದು, ಸಂಘರ್ಷವು ತೀವ್ರ ಹಂತಕ್ಕೆ ತಲುಪಿದೆ. ಇರಾನ್-ಇಸ್ರೇಲ್-ಅಮೆರಿಕ ನಡುವಿನ ಈ ಯುದ್ಧವು ಏಳನೇ ದಿನಕ್ಕೆ ಕಾಲಿಟ್ಟಿದ್ದು, ಕ್ಷಣ ಕ್ಷಣಕ್ಕೂ ಹೆಚ್ಚು ಹಿಂಸಾತ್ಮಕ ರೂಪ ಪಡೆಯುತ್ತಿದೆ.
ನಿರಂತರವಾಗಿ ಬೀಳುತ್ತಿರುವ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಶಬ್ದವು ಮಧ್ಯಪ್ರಾಚ್ಯದಾದ್ಯಂತ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಇರಾನ್ ತನ್ನ ಸುಧಾರಿತ ಶಸ್ತ್ರಾಸ್ತ್ರಗಳನ್ನು ಇನ್ನೂ ಬಳಸಿಲ್ಲವೆಂದು ಅಧಿಕೃತವಾಗಿ ಘೋಷಿಸಿದ್ದು, ಒಂದು ವೇಳೆ ತನ್ನ ಶಸ್ತ್ರಾಗಾರದಲ್ಲಿರುವ ಅತ್ಯಾಧುನಿಕ ಕ್ಷಿಪಣಿಗಳನ್ನು ಬಳಸಲು ಆರಂಭಿಸಿದರೆ ಇಸ್ರೇಲ್ ಮತ್ತು ಅಮೆರಿಕ ಅದನ್ನು ಎದುರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.
ಅಮೆರಿಕದ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಮತ್ತು ಇಸ್ರೇಲ್‌ನ 'ಆಪರೇಷನ್ ಲಯನ್ಸ್ ರೋರ್' (Operation Lion’s Roar) ಕಾರ್ಯಾಚರಣೆಗಳು ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಳೆದ 18 ಗಂಟೆಗಳಲ್ಲಿ ಟೆಹ್ರಾನ್‌ನ 19 ಕಡೆಗಳಲ್ಲಿ ಅಮೆರಿಕ ನೇತೃತ್ವದ ಪಡೆಗಳು ಡ್ರೋನ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದೆ. ಶ್ರೀಲಂಕಾ ಕರಾವಳಿಯ ಬಳಿ ಅಮೆರಿಕದ ದಾಳಿಗೆ 80 ಇರಾನ್ ನಾಗರಿಕರು (ನಾವಿಕರು) ಬಲಿಯಾದ ಘಟನೆಯನ್ನು ಅಂತರಾಷ್ಟ್ರೀಯ ಸಮುದಾಯ ಖಂಡಿಸುತ್ತಿದೆ. ಮಾರ್ಚ್ 6ರಂದು ಟೆಹ್ರಾನ್‌ನ ಪಶ್ಚಿಮ ಭಾಗದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.