Skip to main content
ವಿಡಿಯೋ
crime

ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಎಸ್ಕೇಪ್!

By Bhavana Gowda
ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಎಸ್ಕೇಪ್!

ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯ ಮೇಲೆ ನಡೆದ ಈ ದೌರ್ಜನ್ಯ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕಿದೆ.

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದೆ. ಮಠದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆಂದೋಲಾ ಗ್ರಾಮದ ಚಿನ್ನು ಜಮಾದಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಮಠದಲ್ಲಿದ್ದ ಮಹಿಳೆ ಮೇಲೆ ದೌರ್ಜನ್ಯ

ಮೂಲತಃ ಯಾದಗಿರಿ ಜಿಲ್ಲೆಯವರಾದ ಈ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಹಾಗೂ ಆಶ್ರಯಕ್ಕಾಗಿ ಅವರು ಆಂದೋಲಾ ಗ್ರಾಮದ ಮಠದಲ್ಲೇ ವಾಸವಾಗಿದ್ದರು. ಆದರೆ, ಆರೋಪಿ ಚಿನ್ನು ಜಮಾದಾರ್ ಈಕೆಯನ್ನು ನಂಬಿಸಿ ಪಕ್ಕದ ಹೊಲವೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ

ಮುಸ್ಲಿಂ ವ್ಯಕ್ತಿಯೊಬ್ಬರು ಮಹಿಳೆಯನ್ನು ಹೊಲಕ್ಕೆ ಕರೆದೊಯ್ದಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಹೊಲಕ್ಕೆ ತೆರಳಿ ಪರಿಶೀಲಿಸಿದಾಗ ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿದೆ. ಈ ವೇಳೆ ಯುವಕರು ಘಟನೆಯನ್ನು ವಿಡಿಯೋ ಮಾಡುತ್ತಿದ್ದಾಗ, "ತಪ್ಪಾಗಿದೆ, ಇದೊಂದು ಬಾರಿ ಬಿಟ್ಟುಬಿಡಿ" ಎಂದು ಆರೋಪಿ ಚಿನ್ನು ಜಮಾದಾರ್ ಗೋಗರೆದಿದ್ದಾನೆ ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್: ಆರೋಪಿ ಪರಾರಿ

ಈ ಇಡೀ ಘಟನೆಯ ವಿಡಿಯೋವನ್ನು ಹುಲ್ಲೇಶ್ ಕಾಸರಭೋಸಗಾ ಎಂಬ ಯುವಕ ತನ್ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಎಚ್ಚೆತ್ತ ಆರೋಪಿ ಚಿನ್ನು ಜಮಾದಾರ್ ಗ್ರಾಮದಿಂದ ಪರಾರಿಯಾಗಿದ್ದಾನೆ.

ಪೊಲೀಸರಿಂದ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯ ಮೇಲೆ ನಡೆದ ಈ ದೌರ್ಜನ್ಯ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕಿದೆ.