Skip to main content
ವಿಡಿಯೋ
politics

'ಹೈಕಮಾಂಡ್ ಸಮ್ಮತಿಸಿದರೆ ಮತ್ತೆರೆಡು ಬಜೆಟ್ ಮಂಡಿಸುವೆ': ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!

By Bhavana Gowda
'ಹೈಕಮಾಂಡ್  ಸಮ್ಮತಿಸಿದರೆ ಮತ್ತೆರೆಡು ಬಜೆಟ್ ಮಂಡಿಸುವೆ': ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!

ನಿನ್ನೆಷ್ಟೇ 2026-27ನೇ ಸಾಲಿನ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ದರಾಮಯ್ಯ, ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಮೈಸೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತು ಪರ-ವಿರೋಧ ಚರ್ಚೆಗಳು ತೀವ್ರವಾಗಿ ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಭವಿಷ್ಯದ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. "ಹೈಕಮಾಂಡ್ ಅವಕಾಶ ನೀಡಿದರೆ ನಾನು ಮುಂದಿನ ಎರಡು ಬಜೆಟ್‌ಗಳನ್ನೂ ಮಂಡಿಸಲು ಸಿದ್ಧನಿದ್ದೇನೆ" ಎಂದು ಹೇಳುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

1. ಹೈಕಮಾಂಡ್ ತೀರ್ಮಾನವೇ ಅಂತಿಮ

ನಿನ್ನೆಷ್ಟೇ 2026-27ನೇ ಸಾಲಿನ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ದರಾಮಯ್ಯ, ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. "ನನಗೆ ಹೈಕಮಾಂಡ್ ಮೇಲೆ ಸಂಪೂರ್ಣ ವಿಶ್ವಾಸವಿದೆ. ಹೈಕಮಾಂಡ್ ಸಿಎಂ ಆಗಿ ಮುಂದುವರಿಯಿರಿ ಎಂದು ಹೇಳಿದರೆ ನಾನು ಮುಂದುವರಿಯುತ್ತೇನೆ. ಯಾರು ಏನೇ ಹೇಳಿಕೆ ನೀಡಿದರೂ ಅದು ನನಗೆ ಮುಖ್ಯವಲ್ಲ, ನನಗೆ ಹೈಕಮಾಂಡ್ ತೀರ್ಮಾನವಷ್ಟೇ ಅಂತಿಮ" ಎಂದು ಅವರು ಗುಡುಗಿದ್ದಾರೆ.

2. ಬಜೆಟ್ ದಾಖಲೆಗಿಂತ ಕೆಲಸ ಮುಖ್ಯ

ತಮ್ಮ ಬಜೆಟ್ ಮಂಡನೆಯ ದಾಖಲೆಗಳ ಬಗ್ಗೆ ಮಾತನಾಡಿದ ಸಿಎಂ, "ನನಗೆ ಬಜೆಟ್ ಸಂಖ್ಯೆ ಅಥವಾ ದಾಖಲೆಗಳ ಮೇಲೆ ನಂಬಿಕೆ ಇಲ್ಲ. ಜನರ ಸೇವೆ ಮಾಡುವುದು ಮುಖ್ಯ. ಅವಕಾಶ ಸಿಕ್ಕರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ. ಇನ್ನು ಮುಂದೆ ಈ ಬಗ್ಗೆ ಯಾರು ಏನೇ ಪ್ರಶ್ನೆ ಕೇಳಿದರೂ ನನ್ನ ಒಂದೇ ಉತ್ತರ ಅದು 'ಹೈಕಮಾಂಡ್'" ಎಂದು ಹೇಳುವ ಮೂಲಕ ಚರ್ಚೆಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.

3. ಜನಬೆಂಬಲದ ಶ್ರೀರಕ್ಷೆ

"ಕೇವಲ ಮೈಸೂರಿನ ಜನತೆ ಮಾತ್ರವಲ್ಲ, ಇಡೀ ಕರ್ನಾಟಕದ ಜನತೆ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಬಯಸುತ್ತಿದ್ದಾರೆ. ಜನರ ಆಶೀರ್ವಾದ ನನ್ನ ಮೇಲಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ" ಎಂದು ಸಿದ್ದರಾಮಯ್ಯ ಭಾವುಕರಾಗಿ ನುಡಿದರು.