Skip to main content
ವಿಡಿಯೋ
general

ನೈಟ್ ಜಾಲಿ ರೈಡ್‌ ಹೋದ ವಿದ್ಯಾರ್ಥಿಗಳ ದಾರುಣ ಅಂತ್ಯ; ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು!

By Bhavana Gowda
ನೈಟ್ ಜಾಲಿ ರೈಡ್‌ ಹೋದ ವಿದ್ಯಾರ್ಥಿಗಳ ದಾರುಣ ಅಂತ್ಯ; ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು!

ಹೊಸ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ನೈಟ್ ರೈಡ್ ಎಂಜಾಯ್ ಮಾಡೋಣ ಅಂತ ಹೊರಟಿದ್ದ ಇಬ್ಬರು ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ನೆಲಮಂಗಲ: ಹೊಸ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ನೈಟ್ ರೈಡ್ ಎಂಜಾಯ್ ಮಾಡೋಣ ಅಂತ ಹೊರಟಿದ್ದ ಇಬ್ಬರು ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಹೆದ್ದಾರಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ವಿವರ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಗಳಾದ ಚಂದನ್ (22) ಮತ್ತು ಮಹೇಶ್ (22) ಮೃತಪಟ್ಟ ದುರ್ದೈವಿಗಳು. ಇಬ್ಬರೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರು. ಶನಿವಾರ ತಡರಾತ್ರಿ ಇವರು ಬೆಂಗಳೂರಿನಿಂದ ಕುಣಿಗಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೊಸ ಬೈಕ್‌ನಲ್ಲಿ 'ಜಾಲಿ ರೈಡ್' ಹೊರಟ್ಟಿದ್ದರು. ನೆಲಮಂಗಲ ತಾಲ್ಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಇವರ ವೇಗದ ಬೈಕ್ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ.

ಹೆಲ್ಮೆಟ್ ಕೈಯಲ್ಲಿದ್ದರೂ ಧರಿಸಿರಲಿಲ್ಲ!

ಅಪಘಾತದ ತೀವ್ರತೆಗೆ ಬೈಕ್ ಚಲಾಯಿಸುತ್ತಿದ್ದ ಚಂದನ್ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಮಹೇಶ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ದುರಂತದ ಸಂಗತಿ: ಮೂಲಗಳ ಪ್ರಕಾರ, ವಿದ್ಯಾರ್ಥಿಗಳ ಬಳಿ ಹೆಲ್ಮೆಟ್ ಇತ್ತು. ಆದರೆ ಅದನ್ನು ತಲೆಗೆ ಧರಿಸುವ ಬದಲು ಕೈನಲ್ಲಿ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೆ ಇವರ ಜೀವ ಉಳಿಯುವ ಸಾಧ್ಯತೆಯಿತ್ತು ಎಂದು ಹೇಳಲಾಗುತ್ತಿದೆ.

ಪೋಷಕರ ಆಕ್ರಂದನ

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.