Skip to main content
ವಿಡಿಯೋ
local

ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ; 13 ವರ್ಷದ ಬಾಲಕ ಸ್ಥಳದಲ್ಲೇ ಸಾವು!

By Bhavana Gowda
ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ; 13 ವರ್ಷದ ಬಾಲಕ ಸ್ಥಳದಲ್ಲೇ ಸಾವು!

ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿದ್ದಾನೆ.

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿದ್ದಾನೆ.

ಘಟನೆಯ ವಿವರ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬಾಜೋಳಗಾ ಗ್ರಾಮದ ನಿವಾಸಿ ಶೋಹಮ್ (13) ಮೃತಪಟ್ಟ ದುರ್ದೈವಿ ಬಾಲಕ. ಸೋಮವಾರ ಮಧ್ಯಾಹ್ನ ಬಾಜೋಳಗಾ ಕ್ರಾಸ್‌ನಿಂದ ಟ್ರ್ಯಾಕ್ಟರ್‌ಗೆ ಡೀಸೆಲ್ ತುಂಬಿಸಲು ಹೊರಡಲಾಗಿತ್ತು. ಈ ವೇಳೆ ಬಾಲಕ ಶೋಹಮ್ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡಿದ್ದನು. ಟ್ರ್ಯಾಕ್ಟರ್ ಮದಕಟ್ಟಿ ಕ್ರಾಸ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಸ್ಥಳದಲ್ಲೇ ಸಾವು

ಟ್ರ್ಯಾಕ್ಟರ್ ಪಲ್ಟಿಯಾದ ತೀವ್ರತೆಗೆ ಮೇಲೆ ಕುಳಿತಿದ್ದ ಶೋಹಮ್ ಕೆಳಗೆ ಬಿದ್ದಿದ್ದಾನೆ. ಟ್ರ್ಯಾಕ್ಟರ್‌ನ ಭಾಗ ಬಾಲಕನ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕಣ್ಣೆದುರೇ ಮಗು ಮೃತಪಟ್ಟಿರುವುದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಖಟಕ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.