Skip to main content
ವಿಡಿಯೋ
local

ಗದಗ ಜಿಮ್ಸ್ ಆಸ್ಪತ್ರೆ ಎಡವಟ್ಟು: ರೋಗಿಗಳ ಬದಲು ಜನರ ಸಾಗಾಟ; ಆ್ಯಂಬ್ಯುಲೆನ್ಸ್ ಈಗ 'ಪಬ್ಲಿಕ್ ಟ್ರಾನ್ಸ್‌ಪೋರ್ಟ್'!

By Bhavana Gowda
ಗದಗ ಜಿಮ್ಸ್ ಆಸ್ಪತ್ರೆ ಎಡವಟ್ಟು: ರೋಗಿಗಳ ಬದಲು ಜನರ ಸಾಗಾಟ; ಆ್ಯಂಬ್ಯುಲೆನ್ಸ್ ಈಗ 'ಪಬ್ಲಿಕ್ ಟ್ರಾನ್ಸ್‌ಪೋರ್ಟ್'!

ಗದಗದ ಜಿಮ್ಸ್ ಆಸ್ಪತ್ರೆಯಿಂದ ನಗರದ ಕಡೆಗೆ ಹೋಗುವ ಜನರಿಗೆ ಆ್ಯಂಬ್ಯುಲೆನ್ಸ್ ಚಾಲಕರು ನಿತ್ಯ 'ಡ್ರಾಪ್ ಸೇವೆ' ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಗದಗ: ತುರ್ತು ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಬೇಕಾದ ಆ್ಯಂಬ್ಯುಲೆನ್ಸ್ ಈಗ ಗದಗದಲ್ಲಿ ಪ್ಯಾಸೆಂಜರ್ ವಾಹನದಂತೆ ಬಳಕೆಯಾಗುತ್ತಿದೆ! ಹೌದು, ಗದಗ ಜಿಮ್ಸ್ (GIMS) ಆಸ್ಪತ್ರೆಯ ಆ್ಯಂಬ್ಯುಲೆನ್ಸ್‌ನಲ್ಲಿ ರೋಗಿಗಳ ಬದಲಿಗೆ ಜನರನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸುತ್ತಿರುವ ಆಘಾತಕಾರಿ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆ್ಯಂಬ್ಯುಲೆನ್ಸ್ ಡ್ರೈವರ್‌ಗಳಿಂದ 'ಡ್ರಾಪ್' ಸೇವೆ!

ಗದಗದ ಜಿಮ್ಸ್ ಆಸ್ಪತ್ರೆಯಿಂದ ನಗರದ ಕಡೆಗೆ ಹೋಗುವ ಜನರಿಗೆ ಆ್ಯಂಬ್ಯುಲೆನ್ಸ್ ಚಾಲಕರು ನಿತ್ಯ 'ಡ್ರಾಪ್ ಸೇವೆ' ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರೋಗಿಗಳನ್ನು ಆಸ್ಪತ್ರೆಗೆ ಅಥವಾ ಉನ್ನತ ಚಿಕಿತ್ಸೆಗೆ ಕರೆದೊಯ್ಯಲು ಬಳಕೆಯಾಗಬೇಕಿದ್ದ ಈ ಸರ್ಕಾರಿ ವಾಹನಗಳು, ಈಗ ಸಾರ್ವಜನಿಕರನ್ನು ಸಾಗಿಸುವ ಖಾಸಗಿ ಬಸ್‌ಗಳಂತೆ ಕೆಲಸ ಮಾಡುತ್ತಿವೆ.

ಕುರಿಗಳಂತೆ ಜನರನ್ನು ತುಂಬಿದ ವಿಡಿಯೋ ವೈರಲ್

ಆ್ಯಂಬ್ಯುಲೆನ್ಸ್ ಒಳಗೆ ಜನರನ್ನು ಕಿಕ್ಕಿರಿದು ತುಂಬಿಕೊಂಡು ಹೋಗುತ್ತಿರುವ ವೀಡಿಯೋವೊಂದು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಆ್ಯಂಬ್ಯುಲೆನ್ಸ್‌ಗಳು ನೇರವಾಗಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಇಲಾಖೆಯ ಇಂತಹ ಬೇಜವಾಬ್ದಾರಿತನದ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಹಣದ ಆಸೆಗಾಗಿ ಬಾಡಿಗೆ ಸಾಗಾಟ?

ಸ್ಥಳೀಯರ ಅನುಮಾನದ ಪ್ರಕಾರ, ಆ್ಯಂಬ್ಯುಲೆನ್ಸ್ ಚಾಲಕರು ಹಣದ ಆಸೆಗಾಗಿ ಅಥವಾ ಬಾಡಿಗೆ ಪಡೆದು ಈ ರೀತಿ ಜನರನ್ನು ಸಾಗಿಸುತ್ತಿರಬಹುದು ಎನ್ನಲಾಗುತ್ತಿದೆ. "ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಆ್ಯಂಬ್ಯುಲೆನ್ಸ್ ಸಿಗುವುದಿಲ್ಲ, ಆದರೆ ಇವರಿಗೆ ಜನರನ್ನು ಸಾಗಿಸಲು ಸಮಯವಿದೆ" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆ: ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿರುವುದೇಕೆ? ಜೀವ ರಕ್ಷಕ ವಾಹನಗಳನ್ನು ಬೇಕಾಬಿಟ್ಟಿ ಬಳಸುತ್ತಿರುವ ಚಾಲಕರ ವಿರುದ್ಧ ಕ್ರಮ ಯಾವಾಗ? ಈ ಘಟನೆಯಿಂದಾಗಿ ಗದಗ ಆರೋಗ್ಯ ಇಲಾಖೆಯ ಗೌರವ ಹರಾಜಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.