Skip to main content
ವಿಡಿಯೋ
crime

ನೌಕಾಪಡೆ ಸಿಬ್ಬಂದಿಯೇ ಐಎಸ್‌ಐ ಏಜೆಂಟ್! ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ; ಯುಪಿ ಎಟಿಎಸ್‌ನಿಂದ ಖತರ್ನಾಕ್ ಬೇಹುಗಾರನ ಬಂಧನ

By Bhavana Gowda
ನೌಕಾಪಡೆ ಸಿಬ್ಬಂದಿಯೇ ಐಎಸ್‌ಐ ಏಜೆಂಟ್! ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ; ಯುಪಿ ಎಟಿಎಸ್‌ನಿಂದ ಖತರ್ನಾಕ್ ಬೇಹುಗಾರನ ಬಂಧನ

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಕಾಗರೋಲ್ ನಿವಾಸಿ ಆದರ್ಶ್ ಕುಮಾರ್ (ಲಕ್ಕಿ) ಎಂದು ಗುರುತಿಸಲಾಗಿದೆ.

ಲಖನೌ/ಆಗ್ರಾ: ಭಾರತೀಯ ನೌಕಾಪಡೆಯಲ್ಲಿದ್ದುಕೊಂಡೇ ಶತ್ರು ರಾಷ್ಟ್ರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಪರ ಬೇಹುಗಾರಿಕೆ ನಡೆಸುತ್ತಿದ್ದ ನೌಕಾಪಡೆ ಸಿಬ್ಬಂದಿಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ನೌಕಾಪಡೆಯ ಅತೀ ಸೂಕ್ಷ್ಮ ಮಾಹಿತಿಯನ್ನು ಶತ್ರು ರಾಷ್ಟ್ರದೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಯಾರು ಈ ಆರೋಪಿ?

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಕಾಗರೋಲ್ ನಿವಾಸಿ ಆದರ್ಶ್ ಕುಮಾರ್ (ಲಕ್ಕಿ) ಎಂದು ಗುರುತಿಸಲಾಗಿದೆ. ಈತ ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಹೇಗೆ ನಡೆಯುತ್ತಿತ್ತು ಬೇಹುಗಾರಿಕೆ?

ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ಆದರ್ಶ್ ಕುಮಾರ್ ಡಿಜಿಟಲ್ ಸಂವಹನ (Social Media/Apps) ಮಾಧ್ಯಮಗಳ ಮೂಲಕ ಐಎಸ್‌ಐ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದ.

ಮಾಹಿತಿ ಸೋರಿಕೆ: ನೌಕಾ ನೆಲೆಗೆ ಸಂಬಂಧಿಸಿದ ಪ್ರಮುಖ ಫೋಟೋಗಳು, ನಕ್ಷೆಗಳು ಮತ್ತು ರಹಸ್ಯ ವಿವರಗಳನ್ನು ಪಾಕಿಸ್ತಾನಿ ಏಜೆಂಟರಿಗೆ ರವಾನಿಸುತ್ತಿದ್ದ.

ಹಣಕಾಸು ವ್ಯವಹಾರ: ಈತ ಕೇವಲ ಮಾಹಿತಿ ನೀಡುತ್ತಿದ್ದುದು ಮಾತ್ರವಲ್ಲದೆ, ತನ್ನ ವೈಯಕ್ತಿಕ ಖಾತೆಯ ಮೂಲಕ ಹ್ಯಾಂಡ್ಲರ್‌ಗಳ ಜೊತೆ ಅನುಮಾನಾಸ್ಪದ ಹಣಕಾಸು ವ್ಯವಹಾರವನ್ನೂ ನಡೆಸಿದ್ದ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.

ತನಿಖೆ ಚುರುಕು:

ನೌಕಾಪಡೆಯಲ್ಲೇ ಇದ್ದುಕೊಂಡು ಬೇಹುಗಾರಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಯುಪಿ ಎಟಿಎಸ್, ಕಾರ್ಯಾಚರಣೆ ನಡೆಸಿ ಆದರ್ಶ್‌ನನ್ನು ಸೆರೆಹಿಡಿದಿದೆ. ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಷ್ಟು ಪ್ರಮಾಣದ ಮಾಹಿತಿ ಸೋರಿಕೆಯಾಗಿದೆ? ಎಂಬುದರ ಬಗ್ಗೆ ಭದ್ರತಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿವೆ.