Skip to main content
ವಿಡಿಯೋ
crime

ಬಸ್‌ನಲ್ಲಿ ನಿದ್ದೆಗೆ ಜಾರಿದ್ದೇ ತಪ್ಪಾಯ್ತು; ಹಿಂಬಾಲಿಸಿ ಬಂದು ಕೋಟ್ಯಂತರ ಮೌಲ್ಯದ ಚಿನ್ನ ಎಗರಿಸಿದ ಖದೀಮರು!

By Bhavana Gowda
ಬಸ್‌ನಲ್ಲಿ ನಿದ್ದೆಗೆ ಜಾರಿದ್ದೇ ತಪ್ಪಾಯ್ತು; ಹಿಂಬಾಲಿಸಿ ಬಂದು ಕೋಟ್ಯಂತರ ಮೌಲ್ಯದ ಚಿನ್ನ ಎಗರಿಸಿದ ಖದೀಮರು!

ಖದೀಮರು ಬಂಗಾರವನ್ನು ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಹೋಟೆಲ್ ಹಾಗೂ ಬಸ್ ಬಳಿಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

ಕೊಪ್ಪಳ: ಜಿಲ್ಲೆಯಲ್ಲಿ ಅತಿ ದೊಡ್ಡ ಬಂಗಾರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ಹಿಂಬಾಲಿಸಿಕೊಂಡು ಬಂದ ಕಳ್ಳರ ಗ್ಯಾಂಗ್, ಸಿನಿಮೀಯ ಮಾದರಿಯಲ್ಲಿ ಚಿನ್ನದ ಬ್ಯಾಗ್ ಎಗರಿಸಿ ಪರಾರಿಯಾಗಿದೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಡೆದಿದ್ದೇನು?

ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬುವವರು ಈ ಕಳ್ಳತನಕ್ಕೆ ಒಳಗಾದವರು. ಇವರು ತಮ್ಮ ಬಳಿ ಬಂಗಾರವನ್ನಿಟ್ಟುಕೊಂಡು ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸಿಂಧನೂರಿನಿಂದಲೇ ಈ ಇಬ್ಬರನ್ನು ಚಾಲಾಕಿ ಕಳ್ಳರ ಗ್ಯಾಂಗ್ ಹಿಂಬಾಲಿಸಿಕೊಂಡು ಬಂದಿತ್ತು ಎನ್ನಲಾಗಿದೆ.

ಹೋಟೆಲ್ ಬಳಿ ಸಂಚು ರೂಪಿಸಿದ ಖದೀಮರು

ಬಸ್ ಕೊಪ್ಪಳದ ಹೊರವಲಯದ ಹಲಗೇರಿ ಬಳಿ ಇರುವ 'ಪಂಜಾಬ್ ಹೋಟೆಲ್' (ದಾಬಾ) ಬಳಿ ಊಟಕ್ಕಾಗಿ ನಿಂತಿತ್ತು. ಈ ಸಮಯದಲ್ಲಿ ಪ್ರಯಾಣಿಕರೆಲ್ಲ ಕೆಳಗಿಳಿದಿದ್ದರು. ಆದರೆ, ಚಿನ್ನದ ಬ್ಯಾಗ್ ಹೊಂದಿದ್ದ ಮಹಮ್ಮದ್ ಮತ್ತು ಇರ್ಷಾದ್ ಬಸ್‌ನಲ್ಲಿಯೇ ನಿದ್ದೆಗೆ ಜಾರಿದ್ದರು. ಇದನ್ನು ಗಮನಿಸಿದ ಕಳ್ಳರ ಗ್ಯಾಂಗ್ ಇದೇ ಸರಿಯಾದ ಸಮಯ ಎಂದು ಸಂಚು ರೂಪಿಸಿದೆ.

ಸ್ಕೆಚ್ ಹಾಕಿದ ಗ್ಯಾಂಗ್: ಕಳ್ಳರ ತಂಡದಲ್ಲಿ ಒಟ್ಟು ನಾಲ್ವರು ಇದ್ದರು ಎನ್ನಲಾಗಿದೆ. ಓರ್ವ ಖದೀಮ ಬಸ್‌ನಲ್ಲಿಯೇ ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದರೆ, ಉಳಿದ ಮೂವರು ಹೊರಗಿನಿಂದ ಬಸ್ ಅನ್ನು ಬೆನ್ನಟ್ಟಿ ಬಂದಿದ್ದರು.

ದೋಚಿದ್ದು ಹೇಗೆ?: ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದಾಗ ಮೆಲ್ಲನೆ ಬ್ಯಾಗ್ ಎಗರಿಸಿದ ಕಳ್ಳರು, ಕೂಡಲೇ ಬಸ್‌ನಿಂದ ಕೆಳಗಿಳಿದು ಹೊರಗೆ ಕಾಯುತ್ತಿದ್ದ ತಮ್ಮ ಸಹಚರರೊಂದಿಗೆ ಪರಾರಿಯಾಗಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆ

ಖದೀಮರು ಬಂಗಾರವನ್ನು ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಹೋಟೆಲ್ ಹಾಗೂ ಬಸ್ ಬಳಿಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಇದು ಪೊಲೀಸರಿಗೆ ಪ್ರಮುಖ ಸುಳಿವಿನಂತಾಗಿದೆ. ಸದ್ಯ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಚುರುಕುಗೊಂಡಿದೆ.