Skip to main content
ವಿಡಿಯೋ
local

ಯುದ್ಧದ ಭೀತಿ: ಕಲಬುರಗಿಯಲ್ಲಿ ಗ್ಯಾಸ್ ಸಿಲಿಂಡರ್‌ಗಾಗಿ ಹಾಹಾಕಾರ; ಸುಡುಬಿಸಿಲಲ್ಲೇ ಜನರ ಕ್ಯೂ!

By Bhavana Gowda
ಯುದ್ಧದ ಭೀತಿ: ಕಲಬುರಗಿಯಲ್ಲಿ ಗ್ಯಾಸ್ ಸಿಲಿಂಡರ್‌ಗಾಗಿ ಹಾಹಾಕಾರ; ಸುಡುಬಿಸಿಲಲ್ಲೇ ಜನರ ಕ್ಯೂ!

ಯುದ್ಧದ ಭೀತಿ: ಕಲಬುರಗಿಯಲ್ಲಿ ಗ್ಯಾಸ್ ಸಿಲಿಂಡರ್‌ಗಾಗಿ ಹಾಹಾಕಾರ; ಸುಡುಬಿಸಿಲಲ್ಲೇ ಜನರ ಕ್ಯೂ!

ಕಲಬುರಗಿ: ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಇದರ ನೇರ ಪರಿಣಾಮ ಈಗ ಗೃಹ ಬಳಕೆಯ ಸಿಲಿಂಡರ್ ಪೂರೈಕೆಯ ಮೇಲೆ ಬೀರತೊಡಗಿದೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಸಿಲಿಂಡರ್‌ಗಾಗಿ ಜನರು ಪರದಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಗ್ಯಾಸ್ ಏಜೆನ್ಸಿ ಮುಂದೆ ಕಿಲೋಮೀಟರ್ ಉದ್ದದ ಕ್ಯೂ!

ಸೇಡಂ ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿರುವ ಸವಿತಾ ಗ್ಯಾಸ್ ಏಜೆನ್ಸಿ ಮುಂದೆ ಇಂದು ನೂರಾರು ಗ್ರಾಹಕರು ತಮ್ಮ ಖಾಲಿ ಸಿಲಿಂಡರ್‌ಗಳೊಂದಿಗೆ ಜಮಾಯಿಸಿದ್ದರು. ಯುದ್ಧದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗ್ಯಾಸ್ ಅಭಾವ ಉಂಟಾಗಬಹುದು ಅಥವಾ ದರ ಏರಿಕೆಯಾಗಬಹುದು ಎಂಬ ಭೀತಿಯಿಂದ ಜನರು ಮುಗಿಬಿದ್ದಿದ್ದಾರೆ.

ಸುಡುಬಿಸಿಲಲ್ಲೂ ಕಾದು ಕುಳಿತ ಜನ: ಕಲಬುರಗಿಯ ಕಡು ಬಿಸಿಲನ್ನೂ ಲೆಕ್ಕಿಸದೆ, ವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಗ್ರಾಹಕರು ಬೆಳಿಗ್ಗೆಯಿಂದಲೇ ರಸ್ತೆಯಲ್ಲೇ ಸಿಲಿಂಡರ್ ಸಾಲಾಗಿ ನಿಲ್ಲಿಸಿ ಕಾಯುತ್ತಿದ್ದಾರೆ.

ಮಾಲೀಕರ ಮನವಿಗೆ ಕ್ಯಾರೆ ಎನ್ನದ ಗ್ರಾಹಕರು:

ಜನರ ದಂಡನ್ನು ಕಂಡು ಗ್ಯಾಸ್ ಏಜೆನ್ಸಿ ಮಾಲೀಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. "ಎಲ್ಲರಿಗೂ ಮನೆಗೇ ಸಿಲಿಂಡರ್ ಪೂರೈಕೆ ಮಾಡುತ್ತೇವೆ, ಇಲ್ಲಿ ಅನಗತ್ಯವಾಗಿ ಗಲಾಟೆ ಮಾಡಬೇಡಿ" ಎಂದು ಕೇಳಿಕೊಂಡಿದ್ದಾರೆ. ಆದರೆ, ಏಜೆನ್ಸಿ ಮಾಲೀಕರ ಮಾತನ್ನು ನಂಬದ ಗ್ರಾಹಕರು, "ಈಗಲೇ ನಮಗೆ ಸಿಲಿಂಡರ್ ಬೇಕು" ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಆತಂಕಕ್ಕೆ ಕಾರಣವೇನು?

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ತೀವ್ರಗೊಂಡರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಎಲ್‌ಪಿಜಿ ದರ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಇದೇ ಆತಂಕದಿಂದ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಸಿಲಿಂಡರ್ ಸಂಗ್ರಹಿಸಲು ಮುಂದಾಗುತ್ತಿರುವುದು ಈ ನೂಕುನುಗ್ಗಲಿಗೆ ಕಾರಣವಾಗಿದೆ.

ಜಿಲ್ಲಾಡಳಿತದ ಗಮನಕ್ಕೆ:

ಸದ್ಯಕ್ಕೆ ಸಿಲಿಂಡರ್ ಪೂರೈಕೆಯಲ್ಲಿ ಅಧಿಕೃತವಾಗಿ ಯಾವುದೇ ವ್ಯತ್ಯಯವಾಗಿಲ್ಲದಿದ್ದರೂ, ಸುಳ್ಳು ವದಂತಿಗಳು ಮತ್ತು ಯುದ್ಧದ ಭೀತಿ ಜನರನ್ನು ಕಂಗಾಲಾಗಿಸಿದೆ. ಜಿಲ್ಲಾಡಳಿತವು ಈ ಬಗ್ಗೆ ಮಧ್ಯಪ್ರವೇಶಿಸಿ ಪೂರೈಕೆಯ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.